ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಮನವಿ ಮೇಲೆ ಆದೇಶ ಮಾಡಿರುವ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಗೂಳಿಗೌಡ, ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಭಕ್ತ ಕೋಟಿಯ ಬೇಡಿಕೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿ ಚಿನ್ನದ ರಥ ನಿರ್ಮಿಸುವ ವೆಚ್ಚವನ್ನು ಸರ್ಕಾರ ಪಾಲು ಮತ್ತು ಚಿನ್ನದ ರಥ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರ ತಯಾರಿಸಬೇಕು ಎಂದು ಮನವಿ ಮಾಡಿದ್ದೆ ಎಂದು ಹೇಳಿದ್ದಾರೆ.ಇನ್ನು ದೇವಸ್ಥಾನದಲ್ಲಿ ಈ ಉದ್ದೇಶಕ್ಕಾಗಿ ಪ್ರತ್ಯೇಕ ಹುಂಡಿಯೊಂದನ್ನು ಇಡಬೇಕು. ಭಕ್ತರು ಅದರಲ್ಲಿ ಹಣ ಹಾಗೂ ಚಿನ್ನವನ್ನು ಹಾಕಲು ಅವಕಾಶ ನೀಡಬೇಕು. ಸಂಗ್ರಹಿತ ಕಾಣಿಕೆ ಹಣಕ್ಕಿಂತ ಹೆಚ್ಚಿಗೆ ಬೇಕಾಗುವ ಹಣವನ್ನು ಸರ್ಕಾರ ಭರಿಸಬೇಕು ಎಂದು ಮನವಿ ನೀಡಿದ್ದೆ. ಅದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಆದೇಶ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.