ಚಿರತೆ ದಾಳಿ: ಕೂಲಿ ಕಾರ್ಮಿಕ ಮಹಿಳೆಗೆ ತೀವ್ರ ಗಾಯ

KannadaprabhaNewsNetwork | Published : Mar 3, 2025 1:45 AM

ಸಾರಾಂಶ

ಚಿರತೆ ದಾಳಿಯಿಂದ ಕೂಲಿ ಕಾರ್ಮಿಕ ಮಹಿಳೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ದೊಡ್ಡಅಂಕನಹಳ್ಳಿಯಲ್ಲಿ ಶನಿವಾರ ಸಂಜೆ ನಡೆದಿದೆ. ಬಳ್ಳಾರಿ ಮೂಲದ ಮಂಜು ನಾಯಕ ಪತ್ನಿ ಮಾಲಾಬಾಯಿ (35) ಗಾಯಗೊಂಡಿದ್ದು, ಕೆಸ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕನ್ನಡಪ್ರಭ ವಾರ್ತೆ ಮದ್ದೂರು

ಚಿರತೆ ದಾಳಿಯಿಂದ ಕೂಲಿ ಕಾರ್ಮಿಕ ಮಹಿಳೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ದೊಡ್ಡಅಂಕನಹಳ್ಳಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಬಳ್ಳಾರಿ ಮೂಲದ ಮಂಜು ನಾಯಕ ಪತ್ನಿ ಮಾಲಾಬಾಯಿ (35) ಗಾಯಗೊಂಡಿದ್ದು, ಕೆಸ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಆಧಾರದ ಮೇಲೆ ಕಬ್ಬು ಕಡಿಯಲು ಬಂದಿದ್ದ ಕೂಲಿ ಕಾರ್ಮಿಕರ ಪೈಕಿ ಮಹಿಳೆಯರು ಸೇರಿದಂತೆ 12 ಮಂದಿ ದೊಡ್ಡ ಅಂಕನಹಳ್ಳಿ ಸಮೀಪದ ಹೊರವಲಯದ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದರು.

ಶನಿವಾರ ಸಂಜೆ ಕಬ್ಬಿನ ಗದ್ದೆಯಲ್ಲಿ ಅಡಗಿದ್ದ ಚಿರತೆ ಏಕಾಏಕಿ ಮಾಲಾಬಾಯಿ ಮೇಲೆ ದಾಳಿ ಮಾಡಿದೆ. ಇದರಿಂದ ಕಂಗಾಲಾದ ಆಕೆ ರಕ್ಷಣೆಗಾಗಿ ಕೂಗಿಕೊಂಡಾಗ ಕಬ್ಬು ಕಟಾವ್ ಮಾಡುತ್ತಿದ್ದ ಇತರೆ ಕಾರ್ಮಿಕರು ಸ್ಥಳಕ್ಕೆ ಧಾವಿಸಿ ಗಲಾಟೆ ಮಾಡಿದಾಗ ಚಿರತೆ ಸ್ಥಳದಿಂದ ಪರಾರಿಯಾಗಿದೆ.

ಘಟನೆ ವಿಷಯ ತಿಳಿದು ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಕುರಿತಂತೆ ಮಾಹಿತಿ ಸಂಗ್ರಹಿಸಿದರು. ಚಿರತೆ ಸೆರೆ ಹಿಡಿಯಲು ದೊಡ್ಡ ಅಂಕನಹಳ್ಳಿ ಹೊರವಲಯದಲ್ಲಿ ಬೋನ್ ಇಡುವುದಾಗಿ ಅರಣ್ಯ ಅಧಿಕಾರಿ ಗವಿಯಪ್ಪ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಕಾಡಾನೆಗಳ ದಾಳಿ ಬಾಳೆ ಬೆಳೆ ಸಂಪೂರ್ಣ ನಾಶ

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ದಬ್ಬಹಳ್ಳಿ ಹೊರ ವಲಯದಲ್ಲಿ ಕಾಡಾನೆಗಳ ದಾಳಿಯಿಂದ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ.

ಗ್ರಾಮದ ರಾಮಚಂದ್ರರಿಗೆ ಸೇರಿದ ಬಾಳೆ ತೋಟಕ್ಕೆ ಭಾನುವಾರ ಶಿಂಷಾ ಕಾಡಿನಿಂದ ಬಂದ ಆರೇಳು ಆನೆಗಳ ಹಿಂಡು ದಾಳಿ ಮಾಡಿದ್ದು, ಕೆಲವೇ ದಿನಗಳಲ್ಲಿ ಕಟಾವು ಮಾಡಿಬೇಕಿದ್ದ ಸುಮಾರು 200 ಬಾಳೆ ಗಿಡಗಳು ಸಂಪೂರ್ಣವಾಗಿ ನಾಶವಾಗಿವೆ.

ತೋಟ ಮಾಲೀಕ ರಾಮಚಂದ್ರ ಮಾತನಾಡಿ, ಸುಮಾರು 10 ಲಕ್ಷ ರು.ನಷ್ಟು ಖರ್ಚು ಮಾಡಿ ಜಮೀನು ಸುತ್ತ ಸೋಲಾರ್ ಫೆನ್ಸಿಂಗ್ ಅಳವಡಿಸಿದ್ದವು. ಜೊತೆಗೆ ಬಾಳೆ ಮತ್ತು ಅಡಿಕೆ ಬೆಳೆಯನ್ನು ಬೆಳೆಯಲಾಗಿತ್ತು.

ಭಾನುವಾರ ಬೆಳಗಿನ ಜಾವ ಕಾಡಾನೆಗಳ ದಾಳಿಯಿಂದ ಎಲ್ಲವೂ ನಾಶವಾಗಿದೆ. ಕಾಡಾನೆಗಳ ದಾಳಿ ಬಗ್ಗೆ ಶಿಂಷಾ ವಲಯದ ಅರಣ್ಯಾಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲಾಧಿಕಾರಿಗಳು ಕೂಡಲೇ ಎಚ್ಚೆತ್ತು ಆನೆಗಳ ದಾಳಿ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

Share this article