ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮೃತ ಪಟ್ಟ ಚಿರತೆ ಅಂದಾಜು ಮೂರು ವರ್ಷದ ಚಿರತೆ. ಮೂರು ದಿನಗಳ ಹಿಂದೆ ತಾಲೂಕಿನ ಕೇತೆನಹಳ್ಳಿ ಬಳಿಯ ಗೊಲ್ಲರದೊಡ್ಡಿ ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಅರಣ್ಯ ರಕ್ಷಕ ಆಕಾಶಎಂಬುವವರಿಗೆ ಕಾಡು ಹಂದಿಗಳ ಬೇಟೆಗೆ ಹಾಕಿದ್ದ ಉರುಳಿಗೆ (ಬಲೆಗೆ) ಕಾಲು ಸಿಕ್ಕಿಕೊಂಡು ಒದ್ದಾಡುತಿದ್ದ ಚಿರತೆಯೊಂದು ಕಾಣಿಸಿಕೊಂಡಿದೆ. ಕೂಡಲೇ ಆಕಾಶ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ. ಗಿರೀಶ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಪ್ಪ ಬನ್ನೇರುಘಟ್ಟದಿಂದ ಪಶು ವೈದ್ಯ ಆನಂದ್ ಅವರನ್ನು ಕರೆಸಿ, ಸಕಲ ಸಿದ್ಧತೆಗಳೊಂದಿಗೆ ಹೋಗಿ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಅರವಳಿಕೆ ಇಂಜಕ್ಷನ್ ನೀಡಿದ ಮೇಲೆ ಅದನ್ನು ತಪಾಸಣೆ ಮಾಡಲಾಗಿ, ಅದರ ಕಾಲಿಗೆ ಕಾಡು ಹಂದಿಗಳ ಬೇಟೆಗೆ ಹಾಕಿದ್ದ ಉರುಳಿನ ತಂತಿ ಕಂಬಿ ಸುತ್ತುಕೊಂಡಿರುವುದು ಬೆಳಕಿಗೆ ಬಂದಿದೆ.
ಬನ್ನೇರು ಘಟ್ಟದಿಂದ ಬಂದಿದ್ದ ಡಾ.ಆನಂದ್ ಅವರಿಂದ ಚಿಕಿತ್ಸೆ ನೀಡಿದರೂ ಸಹಾ ಚಿರತೆ ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿದೆ. ಸುಮಾರು ಮೂರು ದಿನಗಳಿಂದ ಪ್ರಾಣಿಯ ದೇಹಕ್ಕೆ ಆಹಾರ ಸಿಗದೆ ಇರುವ ಹಿನ್ನೆಲೆಯಲ್ಲಿ ಗಾಳಿ ಸೇರಿಕೊಂಡು, ನಿರ್ಜಲೀಕರಣದಿಂದ ಸಾವನ್ನಪ್ಪಿರುತ್ತದೆ ಎಂದು ಪಶು ವೈದ್ಯಾಧಿಕಾರಿ ಡಾಕ್ಟರ್ ಜ್ಞಾನೇಶ್ ಮತ್ತು ಡಾ ಪ್ರಮೀಳಾ ಮೃತ ದೇಹವನ್ನು ಮರಣೋತ್ತರ ಪರಿಕ್ಷೆ ನಡೆಸಿ ತಿಳಿಸಿದ್ದಾರೆ ಎಂದು ಅರಣ್ಯಾಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದರು.ಮೃತ ಚಿರತೆಯ ಕಳೆಬರವನ್ನು ಕಾನೂನು ಪ್ರಕಾರ ಬೆಂಕಿಯಲ್ಲಿ ಸುಡಲಾಯಿತು. ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಎಚ್ ಸಿ, ವಲಯ ಅರಣ್ಯಾಧಿಕಾ ಅಜಯ್ ಕುಮಾರ್ ಎಸ್., ಸಹಾಯಕ ಅರಣ್ಯಾಧಿಕಾರಿ ಚಿನ್ನಪ್ಪ ಮತ್ತು ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಸಿಕೆಬಿ-1 ಅರಣ್ಯಾಧಿಕಾರಿಗಳಿಂದ ಉರುಳಿಗೆ ಸಿಲುಕಿರುವ ಚಿರತೆ ಸೆರೆ