ಧಾರವಾಡ: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತದಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗಿ ಹಿರಿಯರ ಬಗ್ಗೆ ನಿರ್ಲಕ್ಷ್ಯ ಭಾವನೆ ಉಂಟಾಗಿ ಸಾಂಪ್ರದಾಯಿಕ ಮೌಲ್ಯಗಳು ದೂರ ಸರಿಯುವಂತಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.
ಇಂದು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಇಲ್ಲದ್ದಕ್ಕೆ ದಾರಿ ತಪ್ಪುವ ಸಾಧ್ಯತೆಯೇ ಹೆಚ್ಚು. ಎಳೆಯ ವಯಸ್ಸಿನಲ್ಲೇ ತಂದೆ-ತಾಯಿ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಸುಸಂಸ್ಕೃತರನ್ನಾಗಿ ಮಾಡುವ ಜವಾಬ್ದಾರಿ ಅಗತ್ಯ. ಇದರಿಂದ ಮಕ್ಕಳು ಸನ್ಮಾರ್ಗದಲ್ಲಿ ನಡೆಯಬಹುದಾಗಿದೆ. ವಿದೇಶಗಳಿಗೆ ಮಕ್ಕಳನ್ನು ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಕಳುಹಿಸುವುದು ತಪ್ಪಲ್ಲ. ಆದರೆ ಷರತ್ತು ಹಾಕಿ ಅವರನ್ನು ವಿದೇಶಕ್ಕೆ ಕಳುಹಿಸಬೇಕು. ಮರಳಿ ದೇಶಕ್ಕೆ ಬಂದು ನಾಡ ಸೇವೆ, ಪಾಲಕರ ಸೇವೆಗೂ ಆದ್ಯತೆ ನೀಡುವಂತಾಗಬೇಕು. ಇಲ್ಲದಿದ್ದರೆ ತಂದೆ-ತಾಯಿ ನಿರ್ಲಕ್ಷಿತರಾಗಿ ಮಕ್ಕಳ ಪ್ರೀತಿಯಿಂದ ವಿಮುಖರಾಗಿ ವೃದ್ಧಾಶ್ರಮ ಸೇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪಾಶ್ಚಾತ್ಯದ ವೃದ್ದಾಶ್ರಮ ಪದ್ಧತಿ ನಮ್ಮ ದೇಶದ ಸಂಸ್ಕೃತಿಗೆ ಸರಿ ಅಲ್ಲ ಎಂದು ಹೇಳಿದರು.
ಪಾಲಕರಿಗೆ ನಿರ್ದಿಷ್ಟವಾದ ತಮ್ಮದೇ ಆದಾಯವಿದ್ದರೆ ಮಕ್ಕಳಿಂದ ಗೌರವಿಸಲ್ಪಡುವಂತಾಗಿದೆ ಎಂದರು.ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ವ್ಯಕ್ತಿಗತ ಜೀವನದಲ್ಲಿ ತಂದೆ ತಾಯಿ, ರೈತ ಹಾಗೂ ದೇಶದ ಗಡಿ ಕಾಯುವ ಯೋಧರಿಗೆ ಉಚ್ಚ ಮಟ್ಟದ ಗೌರವವಿದೆ. ಈ ಮೂರು ಜನರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ತಂದೆ ತಾಯಿ ನಮ್ಮನ್ನು ಪಾಲನೆ ಪೋಷಣೆ ಮಾಡಿದರೆ ರೈತ ಸಕಲ ಜೀವಿಗಳಿಗೂ ಅನ್ನದಾತ. ಯೋಧರು ದೇಶದ ಗಡಿ ಕಾಯ್ದು ನಮ್ಮ ನೆಮ್ಮದಿಯ ಬದುಕಿಗೆ ಕಾರಣವಾಗಿದ್ದಾರೆ. ಡಾ. ಲಿಂಗರಾಜ ಅಂಗಡಿ ತಂದೆ ತಾಯಿಯ ಸೇವೆಯನ್ನು ಶ್ರದ್ಧೆಯಿಂದ ಮಾಡಿ ದತ್ತಿ ಮೂಲಕ ಅವರನ್ನು ಸ್ಮರಿಸಿ ಜೀವಂತವಾಗಿರಿಸಿದ್ದಾರೆ ಎಂದರು.
ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ಜಗತ್ತಿನಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು. ಆದರೆ, ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದರು.ಗದುಗಿನ ನಿವೃತ್ತ ಪ್ರಾಚಾರ್ಯ ಸಿದ್ದು ಯಾಪಲಪರವಿ ಉಪನ್ಯಾಸ ನೀಡಿದರು. ಮಾಜಿ ಶಾಸಕಿ ಸೀಮಾ ಮಸೂತಿ, ಶಿವಶಂಕರ ಹಂಪಣ್ಣವರ, ನಾಗೇಶ ಕಲಬುರ್ಗಿ, ದತ್ತಿ ದಾನಿಗಳಾದ ಸುಮಂಗಲಾ ಅಂಗಡಿ, ಶಂಕರ ಕುಂಬಿ ಮುಂತಾದವರಿದ್ದರು.
ಅಕ್ಸಾ ಮುಲ್ಲಾ ಪ್ರಾರ್ಥಿಸಿದರು. ಸತೀಶ ತುರಮರಿ ಸ್ವಾಗತಿಸಿದರು. ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ಸುಚಿತ ಅಂಗಡಿ ವಂದಿಸಿದರು. ಡಾ. ಮಹೇಶ ಹೊರಕೇರಿ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು.ಡಾ. ಸಂಜೀವ ಕುಲಕರ್ಣಿ, ವೀರಣ್ಣ ಒಡ್ಡೀನ, ಡಾ.ಜಿನದತ್ತ ಹಡಗಲಿ, ಗುರು ಹಿರೇಮಠ, ಡಾ .ಧನವಂತ ಹಾಜವಗೋಳ ಸೇರಿದಂತೆ ಅಂಗಡಿ ಪರಿವಾರದವರು, ನಿವೃತ್ತ ಪ್ರಾಧ್ಯಾಪಕರು, ಗಣ್ಯರು ಉಪಸ್ಥಿತರಿದ್ದರು.
ತಂದೆ ತಾಯಿ ಮಹತ್ವ ಕುರಿತು ಹಾಡಿನ ಸ್ಪರ್ಧೆಯಲ್ಲಿ ಮೈತ್ರಿ ಮಹಿಳಾ ಮಂಡಳ (ಪ್ರಥಮ),ಶ್ರೀ ರಂಜನಿ ಮಹಿಳಾ ಮಂಡಳ (ದ್ವಿತೀಯ), ವೀರಶೈವ ಮಹಿಳಾ ಮಂಡಳ (ತೃತೀಯ), ಭೂಮಿಕಾ ಮಹಿಳಾ ಮಂಡಳ ಮತ್ತು ನಂದಿಕೋಲ ಯೋಗ ಮಹಿಳಾ ಮಂಡಳಗಳು ಸಮಾಧಾನಕಾರ ಬಹುಮಾನ ಪಡೆದಿದ್ದಾರೆ.