- ಕಿರ್ಲೋಸ್ಕರ್ ಕಾಲೋನಿಯಲ್ಲಿ ಚಿರತೆ ಇದೆ ಎಂದು ಕಿಡಿಗೇಡಿಗಳಿಂದ ವೈರಲ್
ಹರಿಹರ: ನಗರದ ಕಿರ್ಲೋಸ್ಕರ್ ಕಾಲೋನಿಯಲ್ಲಿ ಚಿರತೆ ಪ್ರತ್ಯಕ್ಷ ಎಂಬ ಸುದ್ದಿಯಿಂದ ಆ ಭಾಗದ ಜನರಲ್ಲಿ ನೆಮ್ಮದಿ ಹಾಳಾಗಿದೆ. ಹೀಗಿರುವಾಗಲೇ ಕೆಲ ಕಿಡಿಗೇಡಿಗಳು ನಗರದ ನಾನಾ ಭಾಗಗಳಲ್ಲಿ ಚಿರತೆ ಇದೆ ಎಂಬಂತೆ ನಕಲಿ ಚಿತ್ರ ಹಾಗೂ ವಿಡಿಯೋಗಳನ್ನು ಹರಿಬಿಡುವ ಮೂಲಕ ಜನತೆಯ ನಿದ್ದೆಗೆಡಿಸಿದ್ದಾರೆ. ಅರಣ್ಯ ಇಲಾಖೆ ಇಂಥ ವದಂತಿಗಳನ್ನು ನಂಬದಂತೆ, ಎಚ್ಚರಿಕೆ ವಹಿಸುವಂತೆಯೂ ಸೂಚಿಸಿದೆ.
ನಗರದ ಎ.ಕೆ. ಕಾಲೋನಿ, ಮೈಕ್ಲಬ್, ಕಿಮ್ಸ್ ಕಾಲೇಜು, ಹಳೆ ಹರ್ಲಾಪುರ, ಗ್ರೀನ್ ಸಿಟಿ, ತುಂಗಭದ್ರಾ ಆರತಿ ಮೆಟ್ಟಿಲು, ವಿದ್ಯಾನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಎಐ ಹಾಗೂ ಎಲ್ಲಿಯದೋ ಚಿತ್ರ ಹಾಕಿ ಹರಿಹರ ನಗರದ್ದು ಎಂದು ಬಿಂಬಿಸುತ್ತಿದ್ದಾರೆ.ಊಹಾಪೋಹದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮೊನ್ನೆ ವಿದ್ಯಾ ನಗರದ ಎಂಜಿನಿಯರ್ ಒಬ್ಬರ ಮನೆ ಬಳಿ ರಾತ್ರಿ 10.45ರ ಸಮಯದಲ್ಲಿ ಚಿರತೆ ಬಂದಿದೆ ಎಂದು, ಬೆಂಗಳೂರಿನ ಹಳೆಯ ಚಿರತೆ ವಿಡಿಯೋ ವೈರಲ್ ಮಾಡಿದ್ದಾರೆ. ಹಾಗೆಯೇ ಗುತ್ತೂರಿನ ಶಾಲೆಯಲ್ಲಿ ಚಿರತೆ ಪ್ರತ್ಯಕ್ಷ ಎಂದು ಚೀತಾ ಪ್ರಾಣಿಯ ಎಐ, ಚಿತ್ರ ಮಾಡಿ ವೈರಲ್ ಮಾಡಿದ್ದಾರೆ. ಈ ಫೋಟೋ-ವಿಡಿಯೋಗಳ ನೋಡಿರುವ ಪಾಲಕರು ಮಕ್ಕಳನ್ನು ಶಾಲಾ- ಕಾಲೇಜುಗಳಿಗೆ, ಸಂಜೆ ಟ್ಯೂಷನ್‌ಗೆ ಕಳಿಸಲು ಭಯಪಡುತ್ತಿದ್ದಾರೆ.
- - -