ತಾಲೂಕಿನ ಗುಣವಂತೆಯ ಮುಗಳಿಯ ವಾಸು ಈಶ್ವರ ನಾಯ್ಕ ಅವರ ಮನೆಯ ಬಾವಿಯಲ್ಲಿ ಚಿರತೆ ಮಂಗಳವಾರ ಬೆಳ್ಳಂಬೆಳ್ಳಗ್ಗೆ ಕಾಣಿಸಿಕೊಂಡಿದೆ.
ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನ ಗುಣವಂತೆಯ ಮುಗಳಿಯ ವಾಸು ಈಶ್ವರ ನಾಯ್ಕ ಅವರ ಮನೆಯ ಬಾವಿಯಲ್ಲಿ ಚಿರತೆ ಮಂಗಳವಾರ ಬೆಳ್ಳಂಬೆಳ್ಳಗ್ಗೆ ಕಾಣಿಸಿಕೊಂಡಿದೆ.
ಬೆಳಗಿನ ಜಾವ ಮನೆಯವರು ಬಾವಿ ನೀರಿಗಾಗಿ ಪಂಪ್ ಆನ್ ಮಾಡಿದಾಗ ಬಾವಿಯಿಂದ ನೀರು ಬರದೆ ಇರುವುದನ್ನು ಗಮನಿಸಿದ ಮನೆಯವರು ಬಾವಿಗೆ ಹೋಗಿ ನೋಡಿದಾಗ ಬಾವಿಯಲ್ಲಿ ಚಿರತೆ ಕಂಡಿದೆ. ಇದರಿಂದ ಭಯಗೊಂಡ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಆಗಮಿಸಿ ಚಿರತೆಯನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಈ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಬಂದಿತ್ತು. ಇದು ಸುಮಾರು 4ರಿಂದ 5 ವರ್ಷದ ಚಿರತೆ ಆಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊನ್ನಾವರ ಎಸಿಎಫ್ ಜಿ.ಲೋಹಿತ್ ನೇತೃತ್ವದಲ್ಲಿ ಆರ್ ಆಫ್ ಓ ಸವಿತಾ ದೇವಾಡಿಗ, ಡಿ ಆರ್ ಎಫ್ ಮಂಜುನಾಥ್ ನಾಯ್ಕ, ಚಂದ್ರಕಾಂತ್ ಗಾವಡಿ ಈ ವೇಳೆ ಇದ್ದರು.ಸಾಮಾಜಿಕ ಜಾಲತಾಣದಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ 50,000 ಕಳೆದುಕೊಂಡ ವ್ಯಕ್ತಿ
ಸಾಮಾಜಿಕ ಜಾಲತಾಣ ಬಳಸುತ್ತಿದ್ದ ವೇಳೆ ಮೊಬೈಲ್‌ಗೆ ಬಂದ ಅಪರಿಚಿತ ಲಿಂಕ್ ಒಂದನ್ನು ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹50,000 ಕಳೆದುಕೊಂಡು ವಂಚನೆಗೊಳಗಾಗಿರುವ ಘಟನೆ ಕಾರವಾರದಲ್ಲಿ ವರದಿಯಾಗಿದೆ.ಕಾರವಾರದ ದೋಬಿಘಾಟ್ ರಸ್ತೆಯ ನಿವಾಸಿ, ವೃತ್ತಿಯಲ್ಲಿ ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿರುವ ಮೆಹಬೂಬ್‌ಸಾಬ್ ಅಬ್ದುಲ್ ಖಾದರ್ ಲಾಡ್ಲೆವಾಲೆ(34) ವಂಚನೆಗೊಳಗಾದವರು.
ಮೆಹಬೂಬ್‌ಸಾಬ್ ಮಾ. 7ರಂದು ತಮ್ಮ ಮೊಬೈಲ್ ಫೋನ್‌ನಲ್ಲಿ ಸಾಮಾಜಿಕ ಜಾಲತಾಣ ಬಳಸುತ್ತಿದ್ದರು. ಈ ವೇಳೆ ಅವರ ಮೊಬೈಲ್‌ಗೆ ಅಪರಿಚಿತ ಮೂಲದಿಂದ ಆಕರ್ಷಕ ಸಂದೇಶವೊಂದರ ಜೊತೆ ಲಿಂಕ್ ಒಂದು ಬಂದಿದೆ. ಆ ಲಿಂಕ್ ಏನಿರಬಹುದು ಎಂಬ ಕುತೂಹಲದಿಂದ ಮೆಹಬೂಬ್‌ಸಾಬ್ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ.
ಲಿಂಕ್ ಕ್ಲಿಕ್ ಮಾಡಿದ್ದೇ ತಡ, ಅವರ ಮೊಬೈಲ್ ಫೋನ್ ಅನ್ನು ಸೈಬರ್ ಖದೀಮರು ಹ್ಯಾಕ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮೆಹಬೂಬ್‌ಸಾಬ್ ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಒಟ್ಟು ₹50,000 ಹಣ ಕಡಿತಗೊಂಡಿರುವುದಾಗಿ ಮೊಬೈಲ್‌ಗೆ ಎಸ್.ಎಂ.ಎಸ್ ಬಂದಿದೆ. ಇದನ್ನು ಕಂಡು ಗಾಬರಿಗೊಂಡ ಅವರು ಬ್ಯಾಂಕ್ ಸಂಪರ್ಕಿಸಿದಾಗ ವಂಚನೆಗೊಳಗಾಗಿರುವುದು ದೃಢಪಟ್ಟಿದೆ.
ಈ ಕುರಿತು ಮೆಹಬೂಬ್‌ಸಾಬ್ ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.