ಪುತ್ತೂರು : ಡಾ. ಜಗಜೀವನ್ ರಾಂ ಅವರು ಅಸಮಾನತೆ, ಅಸ್ಪೃಶ್ಯತೆ, ಜಾತಿ ಪದ್ಧತಿ ವಿರುದ್ಧ ಸಂಘಟನಾತ್ಮಕವಾಗಿ ಹೋರಾಟ ನಡೆಸಿ, ಕೆಳ ವರ್ಗದ ಜನರಲ್ಲಿ ಜಾಗೃತಿ ಮೂಡಿಸಿದವರು. ಧಮನಿತ ವರ್ಗದ ಅಭಿವೃದ್ಧಿಗಾಗಿ ಶ್ರಮಿಸಿ, ಸಾಮಾಜಿಕ ಬದಲಾವಣೆಯ ಹರಿಕಾರರಾದ ಅವರು ತನ್ನ ಸಾಮಾಜಿಕ ಕಳಕಳಿಯ ಕಾರಣಕ್ಕಾಗಿ ‘ಬಾಬೂಜಿ’ ಆದರು ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಡಿ. ಮಂಚಿ ಹೇಳಿದರು.

ಪುತ್ತೂರು ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ ೧೧೯ ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.ಸಭಾ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಎಸ್.ಬಿ. ಕೂಡಲಗಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ಹೋರಾಟ ನಡೆಸಿ ಜೈಲು ಸೇರಿದ್ದ ಡಾ. ಬಾಬು ಜಗಜೀವನ್ ರಾಂ ಅವರು ಶೋಷಿತ ಸಮಾಜದ ಹಕ್ಕುಗಳಿಗಳ ಹೋರಾಟಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದರು. ಹಸಿರು ಕ್ರಾಂತಿಯ ಮೂಲಕ ಆಹಾರ ಉತ್ಪಾದನೆಯ ಬಗ್ಗೆ ಕಠಿಣ ನಿಲುವು ಹೊಂದಿದ್ದರು. ೧೯೭೧ರಲ್ಲಿ ನಡೆದ ಭಾರತ ಪಾಕ್ ಯುದ್ಧದ ಸಂದರ್ಭದಲ್ಲಿ ದೇಶದ ರಕ್ಷಣಾ ಸಚಿವರಾಗಿ ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಸಚಿವರಾಗಿ ಭಾರತ ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅವರ ಆದರ್ಶ, ವಿಚಾರಧಾರೆಗಳು ಮೇಲ್ಪಂಕ್ತಿಯಾಗಬೇಕು. ಎಲ್ಲಾ ಸಮಾಜದ ಸಮತೋಲನಕ್ಕಾಗಿ ಶ್ರಮಿಸಿದ ಅವರ ಧ್ಯೇಯ ಪಾಲನೆಯಾಗಬೇಕು ಎಂದು ಹೇಳಿದರು.

ದಲಿತ ಸಂಘಟನೆಗಳ ಮುಖಂಡ ಸೇಸಪ್ಪ ನೆಕ್ಕಿಲು ಮಾತನಾಡಿ, ದಲಿತ ವರ್ಗಕ್ಕೆ ಡಾ. ಬಾಬು ಜಗಜೀವನ್ ರಾಂ ಅವರ ಸೇವೆ ಅನನ್ಯವಾಗಿದೆ ಇಂದಿನ ಕಲ್ಪನೆಗಳಿಲ್ಲದ ರಾಜಕಾರಣದ ಮಧ್ಯೆ ರಾಜಕೀಯ ವ್ಯವಸ್ಥೆಗೆ ದೂರದೃಷ್ಟಿ ತೋರಿದ ಅವರ ಅದರ್ಶಗಳು ಪಾಲನೆಯಾಗಬೇಕು ಎಂದರು.ವೇದಿಕೆಯಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಸಿಡಿಪಿಒ ಹರೀಶ್ ಕೆ, ನಗರ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ, ದಲಿತ ಸಂಘಟನೆಗಳ ಮುಖಂಡರಾದ ರಾಮಣ್ಣ ಪಿಲಿಂಜ, ಗಿರಿಧರ್ ನಾಯ್ಕ್ ಉಪಸ್ಥಿತರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ ಕುಮಾರಿ ಸ್ವಾಗತಿಸಿದರು. ವಾರ್ಡನ್ ಪ್ರೇಮಲತಾ ವಂದಿಸಿದರು. ವಾರ್ಡನ್ ಸವಿತಾ ನಿರ್ವಹಿಸಿದರು.