ಶಿರಹಟ್ಟಿ: ತಾಲೂಕಿನ ದೇವಿಹಾಳ ಹೊರವಲಯದಲ್ಲಿನ ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ಕಂಡು ಬಂದಿದ್ದರಿಂದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ರೈತರು ಮತ್ತು ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ ತೆರಳಿ ಶೋಧ ಕಾರ್ಯ ನಡೆಸಿದ್ದು, ನಿಖರವಾದ ಚಿರತೆ ಹೆಜ್ಜೆ ಗುರುತು ಕಂಡುಬಂದಿವೆ.
ರೈತರು ಪ್ರತ್ಯಕ್ಷವಾಗಿ ನೋಡಿದ್ದಾಗಿ ತಿಳಿಸಿದ್ದು, ಮತ್ತೆ ಅರಣ್ಯ ಪ್ರದೇಶದಲ್ಲಿಯೇ ಓಡಿ ಹೋಗಿರುವ ಮಾಹಿತಿ ನೀಡಿದ್ದಾರೆ.ಪ್ರಾಣಿಗಳು ಓಡಾಡುವ ಎಲ್ಲ ಪ್ರದೇಶದಲ್ಲಿಯು ಅರಣ್ಯ ಇಲಾಖೆ ಶೋಧ ಕಾರ್ಯ ನಡೆಸಿದ್ದು, ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿವೆ.ಮುಂಜಾಗ್ರತಾ ಕ್ರಮವಾಗಿ ಇಲಾಖೆಯ ಎರಡು ಜನ ಸಿಬ್ಬಂದಿ ಶೋಧ ಕಾರ್ಯ ನಡೆಸಲು ಬಿಟ್ಟಿದ್ದು, ನಿಖರವಾದ ಚಿರತೆ ಗುರುತು ಪತ್ತೆ ಹಚ್ಚಿದ್ದಾರೆ. ಆದರೆ ಚಿರತೆ ಒಂದೇ ಪ್ರದೇಶದಲ್ಲಿ ಬೀಡು ಬಿಟ್ಟುಕೊಂಡು ಇರುವುದಿಲ್ಲ. ಇಲಾಖೆ ಸಿಬ್ಬಂದಿ ಬೆಳಗ್ಗೆ ಮತ್ತು ಸಂಜೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಗ್ರಾಮಸ್ಥರು ಯಾವುದೇ ರೀತಿಯ ಆತಂಕಪಡಬಾರದು ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ರಾಮಪ್ಪ ಪೂಜಾರ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ರಾತ್ರಿ ವೇಳೆ ರೈತರು ಹಾಗೂ ಕುರಿಗಾಹಿಗಳು ಬ್ಯಾಟರಿ ಬಳಕೆ ಹಾಗೂ ಬೆಂಕಿ ಹಾಕುವದು ಚಿರತೆ ಕಂಡು ಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ತಿಳಿಸಿದ್ದಾರೆ. ಜನರು ಭಯಗೊಳ್ಳದೆ ಇಲಾಖೆಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.