ಗಜೇಂದ್ರಗಡ: ಪಟ್ಟಣದ ರಾಜೂರು ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ಚಿರತೆ ಓಡಾಡಿದೆ ಎಂಬ ದೂರಿನ ಹಿನ್ನೆಲೆ ಸೋಮವಾರ ರಾತ್ರಿಯಿಂದಲೇ ತಾಲೂಕು ಉಪವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಸಾಸಿವಿಹಳ್ಳಿ ನೇತೃತ್ವದ ತಂಡವು ಚಿರತೆ ಪತ್ತೆ ಕಾರ್ಯಕ್ಕೆ ಮುಂದಾಗಿದ್ದು, ರೈತ ಸಮೂಹದಲ್ಲಿ ಕೊಂಚ ನೆಮ್ಮದಿಗೆ ಕಾರಣವಾಗಿದೆ.
ತಾಲೂಕಿನ ಕೆಲ ಗ್ರಾಮಗಳಲ್ಲಿ ಆಗಾಗ ಚಿರತೆ ಓಡಾಟದಿಂದ ಭಯಗೊಳ್ಳುತ್ತಿರುವ ರೈತರು ಕೃಷಿ ಚಟುವಟಿಕೆ ನಡೆಸಲು ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಚಿರತೆ ಓಡಾಟ ನಡೆಸುತ್ತಿದೆ ಎಂಬುದಕ್ಕೆ ತಾಲೂಕಿನಲ್ಲಿ ಎರಡು ಚಿರತೆ ಅರಣ್ಯ ಇಲಾಖೆ ಈಗಾಗಲೇ ಸೆರೆ ಹಿಡಿದಿದೆ. ಹೀಗಾಗಿ ಚಿರತೆ ಬಂದಿದೆ ಎನ್ನುವ ಸುದ್ದಿ ಕೇಳಿದ ಬಳಿಕ ಮಿಂಚಿನ ವೇಗದ ಕಾರ್ಯಾಚರಣೆಗೆ ಮುಂದಾಗುವ ಅರಣ್ಯ ಇಲಾಖೆ ಅಲ್ಲಲ್ಲಿ ಬೋನ್‌ಗಳನ್ನು ಸಹ ಇಟ್ಟಿದೆ. ಆದರೆ ೨-೩ ದಿನಗಳ ಹಿಂದೆ ಲಕ್ಕಲಕಟ್ಟಿ ಗ್ರಾಮದ ಗುಡ್ಡದಲ್ಲಿ ಬೆಂಕಿ ಹಚ್ಚಿದ್ದರಿಂದ ಗುಡ್ಡದಲ್ಲಿನ ಪ್ರಾಣಿಗಳು ಜಮೀನಿನತ್ತ ಬರುತ್ತಿವೆ ಎಂಬ ಚರ್ಚೆಗಳಿಗೆ ಇಂಬು ನೀಡುವಂತೆ ರಾಜೂರು ಗ್ರಾಮದ ಜಮೀನಿನಲ್ಲಿ ರೈತರು ಚಿರತೆ ನೋಡಿದ್ದಾಗಿ ಹೇಳುತ್ತಿರುವುದು ಸುತ್ತಲಿನ ಗ್ರಾಮಗಳ ಜಮೀನಿಗಳಲ್ಲಿನ ರೈತರಲ್ಲಿ ಆತಂಕ ಮನೆ ಮಾಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯಿಂದ ರಾಜೂರ ಗ್ರಾಮದ ಹಿರೇಮನಿ ಅವರ ಜಮೀನು ಸೇರಿದಂತೆ ಸುತ್ತಲಿನ ಜಮೀನುಗಳಲ್ಲಿ ಡ್ರೋನ್ ಮೂಲಕ ಚಿರತೆ ಶೋಧ ಕಾರ್ಯಕ್ಕೆ ಕೈಗೊಂಡು ರೈತರಿಗೆ ಕೆಲ ಎಚ್ಚರಿಕೆ ಕ್ರಮ ತಿಳಿಸಿದ್ದಾರೆ. ಅಲ್ಲದೆ ಸುತ್ತಲಿನ ಜಮೀನುಗಳಲ್ಲಿ ಗಸ್ತು ತಿರುಗುವುತ್ತಿರುವ ಅಧಿಕಾರಿಗಳು ಘಟನೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ಮಾಹಿತಿ ನೀಡುವುದರ ಜತೆಗೆ ಶಾಸಕ ಜಿ.ಎಸ್. ಪಾಟೀಲ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಶೋಧ ಕಾರ್ಯ ತೀವ್ರಗೊಳಿಸಲು ಸೂಚಿಸಿದ್ದಾರೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದರು.ರಾಜೂರು ಹಾಗೂ ಮುಶಿಗೇರಿ ಗ್ರಾಮದ ಜಮೀನುಗಳಲ್ಲಿ ವನ್ಯ ಜೀವಿಗಳ ಹಾವಳಿ ಹೆಚ್ಚಾಗಿದೆ.ಆದರೆ ರಾತ್ರಿ ವೇಳೆ ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಇಲ್ಲದ್ದರಿಂದ ವನ್ಯ ಜೀವಿಗಳ ಶೋಧ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಸದರಿ ಭಾಗದ ಗ್ರಾಮದಲ್ಲಿರುವ ಜನರಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೆಸ್ಕಾಂಗೆ ಪತ್ರ ಬರೆದಿದ್ದಾರೆ.