ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮ
ಕುಷ್ಠರೋಗ ದೀರ್ಘಕಾಲಿನ ಸೋಂಕಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ತೀವ್ರ ವಿರೂಪತ್ವ ಹಾಗೂ ಗಮನಾರ್ಹ ಅಂಗವೈಕಲ್ಯಕ್ಕೆ ಕಾರಣವಾಗಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ತಿಳಿಸಿದರು.
ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನದ ಪ್ರಯುಕ್ತ ತಾಲೂಕು ಆರೋಗ್ಯ ಇಲಾಖೆಯಿಂದ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಮೈಕೊ ಲೆಪ್ರೆ ಎಂಬ ಬ್ಯಾಕ್ಟೀರಿಯಾದಿಂದ ಬರುವ ಈ ಸೋಂಕು ತಗುಲಿದ ಸ್ಥಿತಿಯಲ್ಲಿ ಕೈಕಾಲುಗಳ ನರಗಳು, ಧರ್ಮ, ಮೂಗಿನ ಒಳಪದರ ಮತ್ತು ಮೇಲ್ಭಾಗದ ಶ್ವಾಸೇಂದ್ರೀಯ ಪ್ರದೇಶಗಳು ಹೆಚ್ಚು ಪೀಡನೆಗೆ ಒಳಗಾಗುತ್ತವೆ. ಚರ್ಮದ ಹುಣ್ಣುಗಳು, ನರಗಳ ಅವನತಿ ಮತ್ತು ಸ್ನಾಯು ದೌರ್ಬಲ್ಯ ಕುಷ್ಠರೋಗದ ಸಾಮಾನ್ಯ ಲಕ್ಷಣಗಳಾಗಿವೆ ಎಂದು ಮಾಹಿತಿ ನೀಡಿದರು.ಕುಷ್ಠರೋಗವು ಸೋಂಕು ಹೊಂದಿರುವ ವ್ಯಕ್ತಿ ಸಂಪರ್ಕದಿಂದ ಹರಡುತ್ತದೆ. ಈ ರೋಗ ಹೊಂದಿರುವ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹನಿಗಳ ಮೂಲಕ ಬ್ಯಾಕ್ಟೀರಿಯಾ ಹರಡಬಹುದು. ಇದು ದೀರ್ಘ ಕಾಲದವರೆಗೆ ಚಿಕಿತ್ಸೆ ಪಡೆಯದ ವ್ಯಕ್ತಿ ಯೊಂದಿಗೆ ನಿಕಟವಾಗಿ ಪುನರಾವರ್ತಿತ ಸಂಪರ್ಕ ಹೊಂದುವುದರಿಂದ ಸೋಂಕು ತಗಲುವ ಸಾಧತೆ ಇರುತ್ತದೆ ಎಂದರು.ರೋಗದ ಚಿಹ್ನೆಗಳು ಮತ್ತು ರೋಗ ಲಕ್ಷಣಗಳು ಕಂಡು ಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ದೈಹಿಕ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಸಾಮಾನ್ಯವಾಗಿ 6ತಿಂಗಳಿಂದ ಒಂದು ವರ್ಷದವರೆಗೆ ದೀರ್ಘಾವಧಿ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.ಈ ವೇಳೆ ವೈದ್ಯಾಧಿಕಾರಿ ಡಾ. ದಿವ್ಯಶ್ರೀ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎನ್.ಬೇಬಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ್, ಪಾಂಡುರಂಗ ಶಶಿಧರ್, ಗೀತಾ ಇದ್ದರು.