ಗದಗ: ಜಿಲ್ಲೆಯಲ್ಲಿ ಎಲ್‌ಸಿಡಿಸಿ(ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ) ಸಮೀಕ್ಷಾ ಕಾರ್ಯಕ್ರಮವನ್ನು ನ. 24ರಿಂದ ಡಿ. 9ರ ವರೆಗೆ ನಡೆಸಲಾಗುತ್ತಿದ್ದು, ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್‌ಸಿಡಿಸಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್‌ಸಿಡಿಸಿ ಸಮೀಕ್ಷಾ ಕಾರ್ಯ ಯಶಸ್ವಿಯಾಗಲು ವಿವಿಧ ಇಲಾಖೆಗಳು ಸಹಕಾರ ಅಗತ್ಯ. ತಪಾಸಣೆ ತಂಡಕ್ಕೆ ಶಾಲೆ ಶಿಕ್ಷಕರು ಸಹಕರಿಸಬೇಕು. ಎಲ್‌ಸಿಡಿಸಿ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಗ್ರಾಪಂ ಕಸ ವಿಲೇವಾರಿ ವಾಹನದ ಮುಖಾಂತರ ಮೈಕಿಂಗ್ ಮಾಡುವುದು, ಗ್ರಾಮ ಮಟ್ಟದಲ್ಲಿ ಡಂಗುರ ಸಾರುವ ಮೂಲಕ ಪ್ರಚಾರ ಕೈಗೊಳ್ಳಬೇಕು ಎಂದರು.ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಮಾತನಾಡಿ, ಜಿಲ್ಲೆಯ ಒಟ್ಟು 120 ಗ್ರಾಮಗಳಲ್ಲಿ ಎಲ್‌ಸಿಡಿಸಿ ಸಮೀಕ್ಷೆ ಕೈಗೊಳ್ಳಲಾಗುವುದು. ಎಲ್‌ಸಿಡಿಸಿ ಸಮೀಕ್ಷಾ ಕಾರ್ಯಕ್ರಮ ನ. 24ರಿಂದ ಡಿ. 9ರ ವರೆಗೆ 14 ದಿನಗಳ ವರೆಗೆ ರಜಾ ದಿನಗಳನ್ನು ಹೊರತುಪಡಿಸಿ ನಡೆಸಲಾಗುತ್ತಿದೆ. ಒಂದು ಸಾವಿರ ಜನಸಂಖ್ಯೆಗೆ ಒಂದು ತಂಡ ರಚಿಸಲಾಗಿದೆ. ಈ ತಂಡದಲ್ಲಿ ಒಬ್ಬ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಒಬ್ಬ ಪುರುಷ ಸ್ವಯಂ ಸೇವಕ ಇರುತ್ತಾರೆ. ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆಗಾಗಿ 10 ಸಮೀಕ್ಷಾ ತಂಡಗಳಿಗೆ ಒಬ್ಬ(ಎಚ್‌ಐಒ, ಪಿಎಚ್‌ಸಿಒ, ಎಸ್‌ಎಚ್‌ಐಒ, ಎಸ್‌ಪಿಎಚ್‌ಸಿಒ, ಬಿಎಚ್‌ಇಒ) ಮೇಲ್ವಿಚಾರಕರನ್ನಾಗಿ ಕ್ರಿಯಾಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 434 ಸಮೀಕ್ಷಾ ತಂಡಗಳ ಹಾಗೂ 57 ಅಧಿಕಾರಿಗಳನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ ಎಂದರು.
ಈ ವೇಳೆ ಎಲ್‌ಸಿಡಿಸಿ ಸಮೀಕ್ಷಾ ಕಾರ್ಯಕ್ರಮ ಕುರಿತು ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ, ಕುಟುಂಬ ಕಲ್ಯಾಣಾಧಿಕಾರಿ ವೈ.ಕೆ. ಭಜಂತ್ರಿ, ಡಾ. ಅರುಂಧತಿ ಕುಲಕರ್ಣಿ, ತಾಲೂಕು ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.