ಹೊಸಪೇಟೆ: ಪರಿಶಿಷ್ಟ ಜಾತಿಯ ಎಡ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಲು ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ. ನ್ಯಾಯ ಸಿಗುವವರೆಗೂ ಪಕ್ಷಾತೀತವಾಗಿ ಎಲ್ಲ ನಾಯಕರು ಒಟ್ಟಾಗಿರೋಣ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಹೊಸಪೇಟೆ ಸಮೀಪದ ಮುನಿರಾಬಾದ್ ಬಳಿಯ ಎಆರ್‌ಎಸ್ ಹೋಮ್ ಸ್ಟೇ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿಯ ದ್ವಿತೀಯ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಿಯವರೆಗೂ ನಮ್ಮ ಸಮುದಾಯದ ಯಾವುದೇ ಪಕ್ಷದ ನಾಯಕರಿರಲಿ ಒಗ್ಗಟ್ಟಾಗಿರುವುದಿಲ್ಲವೋ ಅಲ್ಲಿಯವರೆಗೂ ನಮಗೆ ನ್ಯಾಯ ಸಿಗುವುದಿಲ್ಲ. ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸಲು ಒಂದು ಐತಿಹಾಸಿಕ ಮಹತ್ವದ ತೀರ್ಪು ನೀಡಿದ್ದು, ಈ ಸಮುದಾಯಕ್ಕೆ ನ್ಯಾಯ ಸಿಗುವಂತಾಗಿದೆ ಎಂದರು.ಈ ತೀರ್ಪು ಬಂದ ಕೂಡಲೇ ನಾನು ಅಬಕಾರಿ ಸಚಿವ ತಿಮ್ಮಾಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿ ಅನುಷ್ಠಾನಕ್ಕೆ ಒತ್ತಾಯಿಸಿದಾಗ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅನುಷ್ಠಾನ ಮಾಡುತ್ತೇವೆ ಎಂದು ಭರವಸೆ ನೀಡಿದರು ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಈ ತೀರ್ಪು ಸ್ವಾಗತಿಸಿ ತಡಮಾಡದೆ ಅನುಷ್ಠಾನ ಮಾಡಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಮಾಜದ ಸಮಾನತೆಯನ್ನು ಕಾಣಲು ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿದ್ದು, ಅದು ನಿಖರವಾದ ದತ್ತಾಂಶಗಳನ್ನು 40 ದಿನಗಳಲ್ಲಿ ಸಂಗ್ರಹಿಸಿ, ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಕಲ್ಪಿಸಲು ಸಿದ್ಧತೆ ನಡೆಸುತ್ತೇವೆ ಎಂಬ ಮಾತನ್ನು ಕೊಟ್ಟಿದ್ದಾರೆ ಎಂದರು.ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಈ ಸಮುದಾಯದ ಜನಸಂಖ್ಯೆಯ ಅನುಗುಣವಾಗಿ ಮತ್ತು ಆರ್ಥಿಕ ಸ್ಥಿತಿಗಳನ್ನು ಅವಲೋಕನ ಮಾಡಿ ನಿರ್ದಿಷ್ಟವಾದ ಮಾಹಿತಿಗಳೊಂದಿಗೆ ನಮಗೆ ನ್ಯಾಯ ಒದಗಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ನಮ್ಮ ಸೋದರ ಸಮುದಾಯಗಳ ಸಚಿವರಿಗೆ ಧನ್ಯವಾದಗಳನ್ನು ತಿಳಿಸಬೇಕು. ಎಲ್ಲ ಸಚಿವರು ಈ ಒಳಮೀಸಲಾತಿ ಅನುಷ್ಠಾನಕ್ಕೆ ಬೆಂಬಲವಾಗಿದ್ದಾರೆ ಎಂದರು.ಈಗಾಗಲೇ ತೆಲಂಗಾಣ ರಾಜ್ಯ ಒಳ ಮೀಸಲಾತಿ ಅನುಷ್ಠಾನ ಮಾಡಿದ್ದು, ಆಂಧ್ರಪ್ರದೇಶ, ಹರ್ಯಾಣ ರಾಜ್ಯಗಳು ಅನುಷ್ಠಾನಕ್ಕೆ ಮುಂದಾಗಿವೆ. ನಮ್ಮ ರಾಜ್ಯದಲ್ಲಿಯೂ ಮುಂದಿನ 40 ದಿನಗಳಲ್ಲಿ ಸೂಕ್ತ ಅಂಕಿ-ಅಂಶಗಳ ಸಂಗ್ರಹಿಸಿ ಅನುಷ್ಠಾನ ಮಾಡಲಿದ್ದಾರೆ, ತಮಗೆ ಯಾವುದೇ ಸಂಶಯ ಬೇಡ ಎಂದರು.
ನಮ್ಮ ಸೋದರ ಸಮುದಾಯದ ಸಚಿವರಾದ ಡಾ. ಜಿ. ಪರಮೇಶ್ವರ, ಡಾ. ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಈ ಎಲ್ಲ ಸಚಿವರು ಒಂದಾಗಿದ್ದು, ನಾವು ಶೀಘ್ರವಾಗಿ ಅನುಷ್ಠಾನ ಮಾಡುತ್ತೇವೆ ಎಂದರು.ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದರಾದ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ಕೇಂದ್ರದ ಮಾಜಿ ಸಚಿವ ಎ. ನಾರಾಯಣ ಸ್ವಾಮಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಬಸವರಾಜ್ ದಢೇಸೂಗೂರು, ಮುಖಂಡರಾದ ಸುಜಾತಾ ದೊಡ್ಡಮನಿ, ಬಲ್ಲಾಹುಣ್ಸಿ ರಾಮಣ್ಣ, ಹನುಮಂತಪ್ಪ, ವೀರಸ್ವಾಮಿ ಹಾಗೂ ಸಮುದಾಯದ ಹಿರಿಯ ಮುಖಂಡರು ಇದ್ದರು.