ರೋಣ: ನಮ್ಮದು ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಪರಂಪರೆಯ ನಾಡಾಗಿದ್ದು, ನಮ್ಮ ಪೂರ್ವಜರ ಆಚಾರ, ವಿಚಾರ, ಉಡುಗೆ- ತೊಡುಗೆ, ಸಂಪ್ರದಾಯಗಳು, ಸಂಸ್ಕೃತಿ ನಶಿಸುತ್ತಿದ್ದು, ಆದ್ದರಿಂದ ಪುರಾತನ ಸಂಪ್ರದಾಯ, ಸಂಸ್ಕೃತಿ ಉಳಿಯುವುದು ಮುಖ್ಯವಾಗಿವೆ ಎಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಫ್ಯಾಶನಗೆ ಯುವಪೀಳಿಗೆ ಮಾರುಹೋಗಿ ವಿಚಿತ್ರ ರೀತಿಯ ಉಡುಗೆ, ತೊಡುಗೆ ತೊಡುತ್ತಿರುವುದಲ್ಲದೇ, ಆಚಾರ, ವಿಚಾರದಲ್ಲೂ ಬದಲಾಗುತ್ತಿದ್ದಾರೆ. ಇದರಿಂದ ಮೂಲ ಸಂಸ್ಕೃತಿ, ಸಂಪ್ರದಾಯಕ್ಕೆ ಧಕ್ಕೆಯಾಗುತ್ತಿದೆ. ನಮ್ಮ ಪೂರ್ವಜರ ಸಂಪ್ರದಾಯ, ಆಚರಣೆಗಳು ಮಾಯವಾಗುತ್ತಿವೆ. ಇದರಿಂದ ಸಮಾಜ ಸ್ವಾಸ್ಥ್ಯ ಕೆಡುತ್ತಿದೆ. ಆದ್ದರಿಂದ ಯುವಕರು ಪೂರ್ವಜರು, ನಮ್ಮ ಹಿರಿಯರು ಪಾಲಿಸುತ್ತಿರುವ ಸಂಪ್ರದಾಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶ್ರೀಗುರು ಬಸವೇಶ್ವರ ಸರಳ ಸಜ್ಜನಿಕೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಲ್ಲಯ್ಯ ಗುರುಬಸಪ್ಪನಮಠ ಅವರು ಹಿರಿಯ ನಾಗರಿಕರನ್ನು ಸೀರೆ, ಕುಪ್ಪಸ, ಪಟಗಾ, ಧೋತಿ ವಿತರಿಸಿ ಸನ್ಮಾನಿಸುವ ಕಾರ್ಯಕ್ರಮ ವಿಶಿಷ್ಟತೆಯಿಂದ ಕೂಡಿದೆ ಎಂದರು.ಶ್ರೀ ಗುರು ಬಸವೇಶ್ವರ ಸರಳ ಸಜ್ಜನಿಕೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಲ್ಲಯ್ಯ ಗುರುಬಸಪ್ಪನಮಠ ಮಾತನಾಡಿ, ತುಂಡು ಬಟ್ಟೆ ಸಂಪ್ರದಾಯ ಬಿಟ್ಡು ಮೈತುಂಬ ಬಟ್ಟೆ ತೊಡುವಲ್ಲಿ ಮುಂದಾಗಬೇಕು. ನಮ್ಮ ನೆಲದ ಸಂಪ್ರದಾಯ, ವೃದ್ಧರಿಗೆ ಬೇಕಾದ ಸೌಕರ್ಯಗಳು ಸಿಗುವಂತಾಗಬೇಕು. ಈ ದಿಶೆಯಲ್ಲಿ ಸಂಘ ಹೋರಾಡಲಿದೆ. ಮುಂಬರುವ ದಿನಗಳಲ್ಲಿ ಸಂಘ ವೃದ್ಧರಿಗಾಗಿ ವೃದ್ಧಾಶ್ರಮ, ಸಂಗೀತ ಶಾಲೆ, ವೃದ್ಧರಿಗಾಗಿ ಆಸ್ಪತ್ರೆ, ವ್ಯಾಯಾಮ ಶಾಲೆ, ಯೋಗಪಾಠ ಶಾಲೆ ತೆರಯಲಿದೆ ಎಂದರು.
ಕಾರ್ಯಕ್ರಮದಲ್ಲಿ 70 ವರ್ಷ ಮೇಲ್ಮಟ್ಟ 150ಕ್ಕೂ ಹೆಚ್ಚು ವೃದ್ಧರಿಗೆ ಸೀರೆ, ಕುಪ್ಪಸ, ಧೋತಿ, ಪಟಗಾ ವಿತರಿಸಿ ಸನ್ಮಾನಿಸಲಾಯಿತು. ಅಮ್ಮಿನಗಡದಿಂದ ಶ್ರೀಶೈಲಕ್ಕೆ ಮರಗಾಲು ಕಟ್ಟಿಕೊಂಡು ಪಾದಯಾತ್ರೆ ಮಾಡಿದ ಚಿನ್ಮಯಿ ಹಾಗೂ ಬಸವಪ್ರಿಯಾ ಅವರನ್ನು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.