ಬಳ್ಳಾರಿ: ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ, ಬಿಡಾಡಿ ದನ, ನಾಯಿ ಹಾಗೂ ಹಂದಿಗಳ ಹಾವಳಿ, ಅಧಿಕಾರಿಗಳ ಕರ್ತವ್ಯಲೋಪ, ಬಡವರಿಗೆ ವಸತಿ ಸೌಲಭ್ಯ ಸೇರಿದಂತೆ ನಗರದ ವಿವಿಧ ಸಮಸ್ಯೆ ಇಲ್ಲಿನ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದವು.
ನಗರದಲ್ಲಿ ಹಗಲು ವೇಳೆಯಲ್ಲಿಯೇ ಭಾರಿ ಗಾತ್ರದ ಲಾರಿಗಳು ಸಂಚರಿಸುತ್ತಿದ್ದು, ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಒಂದೇ ದಿನ ನಾಲ್ವರು ಸಾವಿಗೀಡಾಗಿರುವ ಘಟನೆ ಆತಂಕಕಾರಿಯಾಗಿದೆ. ಬಳ್ಳಿಯಲ್ಲಿ ನಡೆಯುತ್ತಿರುವ ಸರಣಿ ಸಾವು ನೋಡಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಇನ್ನು ಎಷ್ಟು ಜನರು ಪ್ರಾಣ ಕಳೆದುಕೊಳ್ಳಬೇಕು? ಬಳ್ಳಾರಿಯನ್ನು ಸಾವುಗಳ ನಗರವನ್ನಾಗಿ ಮಾಡಲು ಬಿಡಬಾರದು. ಕೂಡಲೇ ಹಗಲು ವೇಳೆ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು. ನಿರ್ದಿಷ್ಟ ಸಮಯ ನಿಗದಿಪಡಿಸಿ, ಸಂಚಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್, ಈ ಸಂಬಂಧ ಜಿಲ್ಲಾಧಿಕಾರಿಗಳು ಕ್ರಮ ವಹಿಸಿದ್ದಾರೆ. ಹಾಲು, ಗ್ಯಾಸ್ ಹೊತ್ತು ತರುವ ಲಾರಿಗಳು ಹೊರತುಪಡಿಸಿ ಉಳಿದವು ರಾತ್ರಿ ವೇಳೆಯಲ್ಲಿ ಮಾತ್ರ ಸಂಚರಿಸುವಂತಾಗಲು ರಸ್ತೆ ಸುರಕ್ಷಿತ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದು, ಲಾರಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
ಪಾಲಿಕೆ ಸಿಬ್ಬಂದಿ ಹಣ ಫಿಕ್ಸ್ ಮಾಡಿಕೊಂಡಿದ್ದಾರೆ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಒಂದೆಡೆಯಾದರೆ, ಬಿಡಾಡಿ ದನಗಳು ಮತ್ತು ಹಂದಿಗಳ ಕಾಟವೂ ಹೆಚ್ಚಾಗಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವ ಬಿಡಾಡಿ ದನಗಳು ವೃದ್ಧರನ್ನು ಗುದ್ದಿ ಗಾಯಗೊಳಿಸುತ್ತಿವೆ. ಇದರಿಂದ ಸಾರ್ವಜನಿಕರು ಜೀವಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯೆ ಸುರೇಖಾ ಮಲ್ಲನಗೌಡ ಆಪಾದಿಸಿದರು. ಜನರ ಸುರಕ್ಷತೆಯ ದೃಷ್ಟಿಯಿಂದ ಬಿಡಾಡಿ ದನ ಹಾಗೂ ಹಂದಿ ನಿಯಂತ್ರಿಸಲು ಪಾಲಿಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪಾಲಿಕೆಯ ಬಿಲ್ ಕಲೆಕ್ಟರ್ಗಳು, ಕಂದಾಯ ನಿರೀಕ್ಷಕರು (ಆರ್ಐ) ಹಾಗೂ ಕಂದಾಯ ಅಧಿಕಾರಿಗಳು (ಆರ್ಒ) ತಮ್ಮದೇ ಆದ ಮಟ್ಟದಲ್ಲಿ ಹಣ ನಿಗದಿಪಡಿಸಿಕೊಂಡಿದ್ದಾರೆ. ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ. ಹತ್ತು ಬಾರಿ ಕರೆ ಮಾಡಿದರೂ ಬಿಲ್ ಕಲೆಕ್ಟರ್ಗಳು ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ಜನಪ್ರತಿನಿಧಿಗಳಿಗೇ ಈ ಪರಿಸ್ಥಿತಿಯಾದರೆ ಸಾಮಾನ್ಯ ಜನರ ಪಾಡೇನು? ಎಂದು ಸದಸ್ಯ ಇಬ್ರಾಹಿಂ ಬಾಬು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ನೆಲೆಯೂರಿರುವ ಸಿಬ್ಬಂದಿ ಬೇರೆಡೆಗೆ ವರ್ಗಾವಣೆ ಮಾಡಬೇಕು. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಮೂಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ಸಮನ್ವಯದಿಂದ ಕೈಗೊಂಡು, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ರಸ್ತೆಗಳನ್ನು ಮತ್ತೆ ಮತ್ತೆ ಅಗೆದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ತಪ್ಪಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಇನ್ನು ನಗರದ ವಿವಿಧ ರಸ್ತೆಗಳಿಗೆ ದೇವರ ಹೆಸರುಗಳು ಹಾಗೂ ಬಳ್ಳಾರಿಯ ಅಭಿವೃದ್ಧಿಗೆ ಶ್ರಮಿಸಿದ ಗಣ್ಯರ ಹೆಸರು ನಾಮಕರಣ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು. ಉಪ ಮೇಯರ್ ಮುಬೀನಾ ಅಲ್ಲಬಕಾಷ್, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಕೆ.ಹೊನ್ನಪ್ಪ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಹನುಮಂತಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪಾಲಿಕೆಯಿಂದ ಮೂರು ವೈಕುಂಠ ರಥ ಖರೀದಿಸಲು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಬಳ್ಳಾರಿ ಗಾಂಧಿನಗರದಲ್ಲಿರುವ ಶ್ರೀರಾಮಕೃಷ್ಣ ಮಿಷನ್ ಆಶ್ರಮಕ್ಕೆ ತೆರಿಗೆ ವಿನಾಯಿತಿ ಪಾಲಿಕೆ ಸಭೆ ನಿರ್ಧರಿಸಲಾಯಿತು. ಇಡೀ ಸಭೆಯಲ್ಲಿ ನಾಲ್ಕೈದು ಸದಸ್ಯರು ಮಾತ್ರ ಮಾತನಾಡಿದರು. ಉಳಿದವರು ಮೌನವಾಗಿದ್ದರು.