ಕನ್ನಡಪ್ರಭ ವಾರ್ತೆ ಪಾಂಡವಪುರ
ಚುನಾವಣೆಯಲ್ಲಿ ಬಿಜೆಪಿಯ ಒಂದು ಮತವು ಬೇರೆಡೆಗೆ ಹೋಗದಂತೆ ನೋಡಿಕೊಂಡು ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವಿಗೆ ಸಹಕಾರಿಯಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಕಾರ್ಯಕರ್ತರಿಗೆ ಕರೆ ನೀಡಿದರು.ತಾಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್ ಅಕ್ಷಯ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಬೂತ್ ಮಟ್ಟದ ಸಮಾವೇಶದಲ್ಲಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ದೇಶದ ಅಭಿವೃದ್ಧಿ ಜೊತೆಗೆ ಭಾರತವನ್ನು ವಿಶ್ವಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದ್ದಾರೆ. ಪ್ರಧಾನಿ ನಾಯಕತ್ವದಲ್ಲಿ 3ನೇ ಬಾರಿಗೆ ಅಧಿಕಾರಕ್ಕೆ ಬಂದರೆ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಮಹಿಳೆಯರಿಗೆ 1 ಲಕ್ಷ ಕೊಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡುತ್ತಿದೆ. ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರೋದಿಲ್ಲ. ಮಹಿಳೆಯರು ಕಾಂಗ್ರೆಸ್ ಗೆ ಮತಹಾಕಬೇಡಿ ಎಂದು ಮನವಿ ಮಾಡಿದರು.ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಮೈಮರೆಯದೆ ಒಂದೇಒಂದು ಮತವು ಬೇರೆ ಪಕ್ಷಕ್ಕೆ ಹೋಗದಂತೆ ಎನ್ ಡಿಎ ಮೈತ್ರಿ ಅಭ್ಯರ್ಥಿಗೆ ಹಾಕಿಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ 28 ಸ್ಥಾನ ಗೆಲ್ಲುತ್ತೇವೆ. ಎಚ್ ಡಿಕೆ ಗೆದ್ದರೆ ಜಿಲ್ಲೆಯ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣವಿದೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ ನಮ್ಮ ಕ್ಷೇತ್ರದಿಂದ ಅತಿ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಿಬೇಕು. ಅದಕ್ಕಾಗಿ ಬೂತ್ ಅಧ್ಯಕ್ಷ, ಶಕ್ತಿ ಕೇಂದ್ರದ ಅಧ್ಯಕ್ಷರು ತಮ್ಮ ಕುಟುಂಬದ ಸದಸ್ಯರೊಂದಿಗೆ ಬೆಳಗ್ಗೆ 10.30ಯೊಳಗೆ ಮತ ಚಲಾಯಿಸಬೇಕು. ನಂತರ ಮತದಾರರನ್ನು ಕರೆತಂದು ಮೈತ್ರಿ ಅಭ್ಯರ್ಥಿ ಎಚ್ ಡಿಕೆಗೆ ಮತ ಹಾಕಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಇದೇ ವೇಳೆ ವೇಳೆ ಹಲವು ಕಾರ್ಯಕರ್ತರು ಇಂದ್ರೇಶ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಮಂಗಳನವೀನ್, ಮೈಶುಗರ್ ಅಧ್ಯಕ್ಷ ಜೆ.ಶಿವಲಿಂಗಯ್ಯ, ತಾಲೂಕು ಅಧ್ಯಕ್ಷ ಧನಂಜಯ್, ಜಿಲ್ಲಾ ಉಪಾಧ್ಯಕ್ಷ ಸತೀಶ್, ಸಹ ಪ್ರಭಾರಿ ರಜತ್, ಮಂಡಲ ಸಂಚಾಲಕ ಅಶೋಕ್, ಸಹ ಸಂಚಾಲಕ ಹನುಮಂತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಆನಂದ್ ಮಂಡಲ ಅಧ್ಯಕ್ಷ ಶಂಭೂನಹಳ್ಳಿ ಮಂಜುನಾಥ್, ನವೀನ್ ಸೇರಿದಂತೆ ಹಲವರು ಹಾಜರಿದ್ದರು.