ಮುಖ್ಯಮಂತ್ರಿ ಪತ್ರಕ್ಕೂ ಸ್ಪಂದಿಸಿದ ಕೇಂದ್ರ ಸರ್ಕಾರ: ತಂಗಡಗಿ
ಕನ್ನಡಪ್ರಭ ವಾರ್ತೆ ಕೊಪ್ಪಳಬರ ವಿಷಯದಲ್ಲಿ ಬಿಜೆಪಿ ನಾಯಕರು ಮತ್ತು ರಾಜ್ಯದ ಕೇಂದ್ರ ಸಚಿವರು ನಾಟಕ ಮಾಡುವುದನ್ನು ಬಿಟ್ಟು ರೈತರಿಗೆ ಕೇಂದ್ರದಿಂದ ಮೊದಲು ಬರ ಪರಿಹಾರ ಕೊಡಿಸಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವ ಮುನ್ನ ಕೇಂದ್ರ ಸಚಿವರು ಮತ್ತು ಸಂಸದರು ನಿಯಮಾನುಸಾರ ರಾಜ್ಯಕ್ಕೆ ಕೊಡಬೇಕಾದ ಪರಿಹಾರ ಕೊಡಿಸುವಂತೆ ಆಗ್ರಹಿಸಿದರು.ಕರ್ನಾಟಕ ಭಾರತದಲ್ಲಿ ಇದೆಯೇ ಇಲ್ಲವೋ ಎನ್ನುವ ಪ್ರಶ್ನೆ ಎದುರಾಗಿದೆ. ಕೇಂದ್ರ ಮಾಡುತ್ತಿರುವ ಈ ಧೋರಣೆಯಿಂದ ಹಾಗೇ ಅನಿಸುತ್ತದೆ. ರಾಜ್ಯದ ರೈತರು ತೆರಿಗೆ ತುಂಬುತ್ತಿಲ್ಲವೇ, ರಾಜ್ಯದ ತೆರಿಗೆ ಕೇಂದ್ರಕ್ಕೆ ಸೇರುತ್ತಿಲ್ಲವೇ, ಹಾಗಾದರೇ ಯಾಕೆ ಈ ರೀತಿ ಮಾಡುತ್ತಿದ್ದಾರೆ. ಬರ ಪರಿಹಾರ ಕುರಿತು ಸಿಎಂ ಪತ್ರ ಬರೆದಿದ್ದರೂ ಇದುವರೆಗೂ ಕೇಂದ್ರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ರಮೇಶ ಜಾರಕೀಹೊಳಿ ಹಗಲು ಕನಸು ಕಾಣುವುದನ್ನು ಬಿಡಬೇಕು. ರಾಜ್ಯ ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಿಎಂ ಬದಲಾವಣೆ ಚರ್ಚೆಯೇ ಇಲ್ಲ. ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.ಸಿದ್ದರಾಮಯ್ಯ ಅವರಿಗೆ ಸನ್ಮಾನ:
50 ವರ್ಷಗಳ ಹಿಂದೆ ಡಿ. ದೇವರಾಜ ಅರಸು ಅವರಿಗೆ ಸನ್ಮಾನ ಮಾಡಿದ ಗದಗನಲ್ಲಿಯೇ ದೇವರಾಜ ಅರಸು ಎಂದೇ ಖ್ಯಾತರಾಗಿರುವ ಈಗಿನ ಸಿಎಂ ಸಿದ್ದರಾಮಯ್ಯ ಅವರಿಗೆ ನ. 3 ರಂದು ಸನ್ಮಾನ ಮಾಡಲಾಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದರು.