ಧಾರವಾಡ ನೆಲದಿಂದ ಪ್ರಾರಂಭವಾದ ಏಕೀಕರಣ ಚಳುವಳಿ

KannadaprabhaNewsNetwork | Published : Nov 2, 2023 1:01 AM

ಸಾರಾಂಶ

ಭಾರತದ ಇತಿಹಾಸದಲ್ಲಿ ಸ್ವಾತಂತ್ರ‍್ಯ ಹೋರಾಟಕ್ಕೆ ದೊರೆತಿರುವ ಪ್ರಾಮುಖ್ಯತೆಯಂತೆ, ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯೂ ಮಹತ್ವ ಪಡೆದಿದೆ. ಕರ್ನಾಟಕ ಏಕೀಕರಣದ ಚಳವಳಿಯು ಧಾರವಾಡ ನೆಲದಲ್ಲಿ ಪ್ರಾರಂಭವಾಗಿದ್ದು ನಮ್ಮೆಲ್ಲರ ಅಭಿಮಾನದ ಸಂಕೇತ ಎಂದು ಕಾರ್ಮಿಕ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಭಾರತದ ಇತಿಹಾಸದಲ್ಲಿ ಸ್ವಾತಂತ್ರ‍್ಯ ಹೋರಾಟಕ್ಕೆ ದೊರೆತಿರುವ ಪ್ರಾಮುಖ್ಯತೆಯಂತೆ, ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯೂ ಮಹತ್ವ ಪಡೆದಿದೆ. ಕರ್ನಾಟಕ ಏಕೀಕರಣದ ಚಳವಳಿಯು ಧಾರವಾಡ ನೆಲದಲ್ಲಿ ಪ್ರಾರಂಭವಾಗಿದ್ದು ನಮ್ಮೆಲ್ಲರ ಅಭಿಮಾನದ ಸಂಕೇತ ಎಂದು ಕಾರ್ಮಿಕ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿದಿಂದ ಆಯೋಜಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿದ ಅವರು, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದ ಧಾರವಾಡ ಜಿಲ್ಲೆಯ ಪ್ರಮುಖರಾದ ರಾ.ಹ. ದೇಶಪಾಂಡೆ, ಡೆಪ್ಯೂಟಿ ಚನ್ನಬಸಪ್ಪ, ಅದರಗುಂಚಿ ಶಂಕರಗೌಡ ಪಾಟೀಲರು ನಿರ್ಣಾಯಕ ಹೋರಾಟ ಮಾಡಿದ್ದಾರೆ. ವಿವಿಧ ಸುಮಾರು 19 ಆಡಳಿತ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು, ಬ್ರಿಟೀಷರ ಆಡಳಿತದ ನಂತರದ 1956ರಲ್ಲಿ ಪುನ: ಒಂದಾಗಿ ಮೈಸೂರು ರಾಜ್ಯದಲ್ಲಿ ವಿಲೀನಗೊಂಡವು. ಈ ಏಕೀಕರಣದ ನಂತರ 1973ರ ನವೆಂಬರ್, 1 ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ'''' ಎಂದು ಮರು ನಾಮಕರಣ ಮಾಡಲಾಯಿತು ಎಂದರು.

ಜಿಲ್ಲೆಯು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ. ಕರ್ನಾಟಕ ಸರ್ಕಾರ ಡಾ. ದ.ರಾ. ಬೇಂದ್ರೆ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಆಲೂರು ವೆಂಕಟರಾವ್, ಡಿ.ವಿ. ಹಾಲಭಾವಿ ಹಾಗೂ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಟ್ರಸ್ಟ್ ಗಳನ್ನು ಸ್ಥಾಪಿಸುವ ಮುಖಾಂತರ ಕನ್ನಡ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿದೆ. ಈ ವರ್ಷದ ಆಯವ್ಯಯದಲ್ಲಿ ನಾಡಿನ ಖ್ಯಾತ ಸಂಶೋಧಕರಾದ ಡಾ.ಎಂ.ಎಂ. ಕಲಬುರ್ಗಿ ಹೆಸರಿನಲ್ಲಿ ಪ್ರತಿಷ್ಠಾನವನ್ನು ಧಾರವಾಡದಲ್ಲಿ ಸ್ಥಾಪಿಸುತ್ತಿರುವುದು ಮತ್ತು ಕನ್ನಡ ಸಂಶೋಧನಾ ಕ್ಷೇತ್ರವನ್ನು ವಿಸ್ತರಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದರು.

ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಎಲ್ಲ ಎಂಟು ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ₹212 ಕೋಟಿಗಳ ಪರಿಹಾರ ಒದಗಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಬರಗಾಲವಿದ್ದರೂ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಪಂ ಸಿಒಇ ಸ್ವರೂಪ ಟಿ.ಕೆ., ಎಸ್ಪಿ ಡಾ.ಗೋಪಾಲ ಬ್ಯಾಕೋಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ಇತತರು ಇದ್ದರು.

ಆಕರ್ಷಕ ಪಥಸಂಚಲನ

ಕನ್ನಡ ರಾಜ್ಯೋತ್ಸವದ ಜಿಲ್ಲಾ ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಆರ್. ಎಸ್.ಐ. ವಾಸು ರಕ್ಷೇದ, ಜಿಲ್ಲಾ ನಾಗರಿಕ ಪೊಲೀಸ್ ತಂಡವನ್ನು ಆರ್.ಎಸ್‌.ಐ. ಮಲ್ಲನಗೌಡ ಗುತ್ತರಗಿ, ಗೃಹರಕ್ಷಕ ದಳವನ್ನು ವಾದಿರಾಜ ದೇಶಪಾಂಡೆ, ಅಗ್ನಿಶಾಮಕ ಇಲಾಖೆ ದಳವನ್ನು ಎಫ್‌ಎಸ್‌ಒ ಅನುರಾಗ ಬಿ.ಎಲ್., ಎನ್‌ಸಿಸಿ. ತಂಡವನ್ನು ಶಕೀಲ್ ಅಹ್ಮದ್ ಕುಂದಗೋಳ, ಅಬಕಾರಿ ಇಲಾಖೆ ತಂಡವನ್ನು ಶಬ್ಬೀರ್ ಜಮಾದಾರ, ಅರಣ್ಯ ಇಲಾಖೆ ತಂಡವನ್ನು ಸಂತೋಷ್ ಕುಮಾರ್ ಎಂ.ಜಿ., ಭಾರತ ಸ್ಕೌಟ್ ಮತ್ತು ಗೈಡ್ಸ್ ತಂಡವನ್ನು ಪ್ರಜಂಟೇಶನ್ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ನೇತೃತ್ವದಲ್ಲಿ ಆಕರ್ಷಕವಾಗಿ ಪಥಸಂಚಲನ ನಡೆಯಿತು. ಜಿಲ್ಲಾ ಪೊಲೀಸ್ ಬ್ಯಾಂಡ್‌ನ ಬ್ಯಾಂಡ್ ಮಾಸ್ಟರ್ ವೈ.ಎಫ್. ಭಜಂತ್ರಿ ನೇತೃತ್ವದಲ್ಲಿ ಸ್ಟಿಕ್ ಮೇಜರ್ ಸಾಗರ ಬಸರಕೋಡಿ ಅತ್ಯುತ್ತಮವಾಗಿ ಬ್ಯಾಂಡ್ ನುಡಿಸಿ ಗೌರವ ಸಲ್ಲಿಸಿದರು. ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಕನ್ನಡ ಹಾಡುಗಳಿಗೆ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

Share this article