ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆ ಸಮೀಪದ ಬಸವನಗದ್ದೆಯ ಮನೆಯೊಂದರಲ್ಲಿದ್ದ ಕಾಡುಪ್ರಾಣಿಗಳ ಕೊಂಬುಗಳನ್ನು ವನ್ಯಜೀವಿ ವಿಭಾಗದ ಅಧಿಕಾರಿಗಳನ್ನು ವಶಪಡಿಸಿಕೊಂಡರು. ಈ ವೇಳೆ ಮನೆ ಯಜಮಾನರನ್ನು ಬಂಧಿಸಲು ಮುಂದಾಗಿದ್ದ ಅಧಿಕಾರಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ತೀವ್ರ ತರಾಟೆ ತೆಗೆದುಕೊಂಡರು. ಅಲ್ಲದೇ, ಪ್ರಕರಣದಲ್ಲಿ ಯಾರನ್ನೂ ಬಂಧಿಸದಂತೆ ತಡೆಯುವಲ್ಲಿ ಯಶಸ್ವಿಯಾದರು. ಬುಧವಾರ ಬೆಳಗ್ಗೆ ಬಸವನಗದ್ದೆ ಗ್ರಾಮದ ಪ್ರಸನ್ನ ಎಂಬವರ ಮನೆ ಮೇಲೆ ನಡೆದಿರುವ ದಾಳಿ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ವನ್ಯಜೀವಿ ಅಧಿಕಾರಿಗಳ ಮೇಲೆ ಹರಿಹಾಯ್ದ ಶಾಸಕರು, ಈ ಪ್ರಕರಣಕ್ಕೆ ಸಂಬಂಧಿಸಿ ಇಂದಿಲ್ಲಿ ಯಾರನ್ನೂ ಬಂಧಿಸಲಾಗದು. ಒಂದೊಮ್ಮೆ ಬಂಧಿಸುವುದಾದರೆ ನಮ್ಮ ಹೆಣದ ಮೇಲೆ ಬಂಧಿಸಬೇಕಾಗುತ್ತದೆ ಎಂದೂ ಎಚ್ಚರಿಸಿದರು. ಕಾಯ್ದೆ ಎಲ್ಲರಿಗೂ ಒಂದೇ ಆಗಿದೆ. ಆದರೆ ಮುಗ್ದ ಜನರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ನಿಮ್ಮ ಇಲಾಖೆಗೆ ಪ್ರಭಾವಿಗಳನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ. ಮಂತ್ರಿಗಳ ಮನೆಯವರ ಕೊರಳಲ್ಲಿ ಮತ್ತು ಪ್ರಭಾವಿಗಳ ಮನೆಗಳಲ್ಲಿ ಸಿಗುವ ವಸ್ತುಗಳನ್ನು ಜಪ್ತಿ ಮಾಡಿ, ಅಂಥವರನ್ನು ಬಂಧಿಸಲು ನಿಮ್ಮ ಇಲಾಖೆಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಜ್ಞಾನೇಂದ್ರ, ಇವರು ವ್ಯಾಪಾರ ಮಾಡುವವರಲ್ಲ. ಸಜ್ಜನರು. ಮಲೆನಾಡಿನ ಮನೆಗಳಲ್ಲಿ ಇವೆಲ್ಲ ಸಾಮಾನ್ಯ ಎಂದರು. ವನ್ಯಜೀವಿ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯಿಸಿ, ಈ ಮನೆ ನೆಲಮಾಳಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ಕಾಡುಪ್ರಾಣಿಗಳ ಕೊಂಬುಗಳನ್ನು ಸಂಗ್ರಹಿಸಲಾಗಿದೆ ಎಂಬ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ದಾಳಿ ನಡೆಸಿರುವುದಾಗಿ ಸ್ಪಷ್ಟಪಡಿಸಿದರು. ಬಳಿಕ ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರ ಸಲಹೆಯಂತೆ, ಮನೆಯ ಯಾರನ್ನೂ ಬಂಧಿಸದೇ ಅಧಿಕಾರಿಗಳು ಕೇವಲ ವಸ್ತುಗಳನ್ನು ವಶಪಡಿಸಿಕೊಂಡು ದೂರನ್ನು ದಾಖಲಿಸಿದ್ದಾರೆ. ಏನಾಯ್ತು?: ಬಸವನಗದ್ದೆಯ ಪ್ರಸನ್ನ ಅವರ ಮನೆಯಲ್ಲಿ ದೊಡ್ಡ ಪ್ರಮಾಣದ ವನ್ಯಜೀವಿ ವಸ್ತುಗನ್ನು ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ನ್ನು ಯಾರೋ ಅರಣ್ಯ ಇಲಾಖೆಯ ಬೆಂಗಳೂರು ಕಚೇರಿಗೆ ನೀಡಿದ್ದಾರೆ. ಅಲ್ಲಿಂದ ಬಂದ ಸೂಚನೆಯಂತೆ ತೀರ್ಥಹಳ್ಳಿಯ ಅರಣ್ಯಾಧಿಕಾರಿಗಳು ದಿಢೀರನೆ ಬಸವನಗದ್ದೆಯ ಪ್ರಸನ್ನರ ಮನೆ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಅವರ ಮನೆಯಲ್ಲಿ ಅವರ ಪೂರ್ವಜರಿಂದ ಬಂದಿದ್ದ ಹಲವು ಜಿಂಕೆಯ ಮತ್ತು ಕಾಡುಕೋಣದ ಕೋಡುಗಳ ಸಂಗ್ರಹ ಇದ್ದವು. ಇವನ್ನು ಜಪ್ತಿ ಮಾಡಿದ ಅರಣ್ಯ ಸಿಬ್ಬಂದಿ ತಮ್ಮೊಂದಿಗೆ ವಿಚಾರಣೆಗೆ ಕಚೇರಿಗೆ ಬರುವಂತೆ ಪ್ರಸನ್ನರಿಗೆ ಸೂಚನೆ ನೀಡಿದರು. ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಆಗಮಿಸಿ, ಪ್ರಸನ್ನ ಅವರ ಬಂಧನವನ್ನು ತಪ್ಪಿಸಿದರು. ಇದು ಜಾಮೀನಿನ ಅಪರಾಧ ಎಂಬ ಇಲಾಖೆ ವಾದವನ್ನು ತಳ್ಳಿಹಾಕಿದ ಶಾಸಕರು, ಇಂದು ರಜಾ ದಿನ. ನೀವು ಏನು ಮಾಡುತ್ತೀರಿ ಎಂದು ಗೊತ್ತು. ವಿಚಾರಣೆ ಬೇಕಿದ್ದರೆ ಇಲ್ಲಿಯೇ ಮಾಡಿ. ನೋಟಿಸ್ ನೀಡಿ, ವಸ್ತುಗಳನ್ನು ಜಪ್ತಿ ಮಾಡಿ ಎಂದು ಸೂಚಿಸಿದರು. ಪೂರ್ವಜರಿಂದ ಬಂದಿದ್ದು: ಪ್ರಸನ್ನ ಅವರ ಪ್ರಕಾರ ಜಿಂಕೆ, ಕಾಡುಕೋಣದ ಕೊಂಬುಗಳು ತಮ್ಮ ಪೂರ್ವಜರಿಂದ ಬಂದದ್ದು, ತಾವು ಅದನ್ನು ಅಟ್ಟದ ಮೇಲೆ ಹಾಕಿದ್ದೆವು. ಜೊತೆಗೆ ಇವೆಲ್ಲವೂ ಕಾಡಿನಲ್ಲಿ ಪ್ರಾಣಿಗಳು ಉದುರಿಸಿ ಹೋದ ಕೊಂಬುಗಳಾಗಿವೆ. ಇದರಲ್ಲಿ ಮಾರಾಟ ಅಥವಾ ಇನ್ನಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. - - - ಬಾಕ್ಸ್ ಅರಣ್ಯ ಕಾನೂನಿಗೆ ತಿದ್ದುಪಡಿ ಬೇಕು: ಜ್ಞಾನೇಂದ್ರ ತೀರ್ಥಹಳ್ಳಿ: ಪ್ರಾಣಿಗಳ ವಸ್ತುಗಳನ್ನು ಹೊಂದಿದವರ ಮೇಲೆ ಅರಣ್ಯ ಇಲಾಖೆ ಮಾಡುತ್ತಿರುವ ದಾಳಿ ಮತ್ತು ಬಂಧನದ ಹಿನ್ನೆಲೆ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತರಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಕಾನೂನಿನ ಭಯದಿಂದ ಜನರು ಅಮೂಲ್ಯವಾದ ಪ್ರಕೃತಿ ಸಂಪತ್ತನ್ನು ನಾಶಪಡಿಸುವ ಆತಂಕವಿದೆ ಎಂದು ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು. ಬಸವನಗದ್ದೆಯ ಮನೆಯೊಂದರ ಮೇಲೆ ಅರಣ್ಯ ಇಲಾಖಾಧಿಕಾರಿಗಳು ದಾಳಿ ನಡೆಸಿ, ಮನೆ ಯಜಮಾನರನ್ನು ಬಂಧಿಸಲು ಮುಂದಾದ ವೇಳೆ ಆಗಮಿಸಿದ ಆರಗ ಜ್ಞಾನೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು. ಹುಲಿ ಉಗುರು, ಕಾಡುಕೋಣಗಳ ಕೊಂಬು ಮುಂತಾದ ವಸ್ತುಗಳು ಅನಾದಿ ಕಾಲದಿಂದ ಈ ಭಾಗದ ಮನೆಗಳಲ್ಲಿ ಸಂಗ್ರಹಿಸಿಕೊಂಡು ಬರಲಾಗುತ್ತಿದೆ. ಆದರೆ, ಇವರ್ಯಾರೂ ಪ್ರಾಣಿಗಳನ್ನು ಭೇಟಿಯಾಡಿ, ಈ ವಸ್ತುಗಳನ್ನು ಸಂಗ್ರಹಿಸಿದವರಲ್ಲ ಎಂಬುದನ್ನು ಸರ್ಕಾರ ಅರಿಯಬೇಕಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಸಾಲೇಕೊಪ್ಪ ರಾಮಚಂದ್ರ, ಕುಣಜೆ ಕಿರಣ್ ಪ್ರಭಾಕರ್, ಹಣಗೆರೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷೆ ಸರೋಜಮ್ಮ, ಹೊನಾಸ್ ಗದ್ದೆ ಮಂಜುನಾಥ್, ಅಶೋಕ್ ಮುಂತಾದವರು ಇದ್ದರು. - - - -01ಕೆಪಿಎಸ್‌ಎಂಜಿ22: ಹಣಗೆರೆ ಸಮೀಪದ ಬಸವನಗದ್ದೆ ಗ್ರಾಮದ ಮನೆಯಲ್ಲಿದ್ದ ಕಾಡುಪ್ರಾಣಿಗಳ ಕೊಂಬನ್ನು ವಶಪಡಿಸಿಕೊಂಡು, ಮನೆ ಯಜಮಾನರನ್ನು ಬಂಧಿಸಲು ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟಿಸಿ, ಬಂಧನವನ್ನು ತಪ್ಪಿಸಿದರು.