ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಪುಸ್ತಕಗಳು ಸ್ನೇಹಿತನಂತೆ ಕಾಪಾಡಿ, ತಾಯಿಯಂತೆ ಪೋಷಿಸುತ್ತವೆ. ಗುರುಗಳಂತೆ ಕಲಿಸುತ್ತವೆ. ಮುಖದಲ್ಲಿ ಮಂದಹಾಸ ಮೂಡಿಸುವ ಪುಸ್ತಕಗಳು ನಮ್ಮ ನಿತ್ಯಜೀವನದ ಸಂಗಾತಿಗಳಾಗಬೇಕು ಎಂದು ಸಮಾಜ ಸಂಘಟಕರು, ಮಹಾಲಿಂಗಪುರದ ಜಿ.ಎಸ್. ಗೊಂಬಿ ಅಭಿಪ್ರಾಯಪಟ್ಟರು.
ರಬಕವಿಯ ದಲಾಲ ಅವರ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ - ಬನಹಟ್ಟಿ, ವಲಯಗಳು ತೇರದಾಳ, ಮಹಾಲಿಂಗಪುರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-೨೮ ಕಾರ್ಯಕ್ರಮದಲ್ಲಿ ಮಹಾಲಿಂಗಪುರದ ನಿವೃತ್ತ ಶಿಕ್ಷಕ ಶಿವಪ್ಪ ಎಸ್. ಕರಡಿ ಅವರ ಬೆಳಗುತಿದೆ ಜ್ಯೋತಿ ಕೃತಿ ಅವಲೋಕಿಸಿ ಮಾತನಾಡಿದ ಅವರು, ವೈವಿಧ್ಯಮಯ ೩೩ ವಿಶಿಷ್ಠ, ವೈಚಾರಿಕ ಲೇಖನಗಳು ಗಮನ ಸೆಳೆಯುತ್ತವೆ ಎಂದರು.ಉದ್ದಿಮೆದಾರರಾದ ರಬಕವಿಯ ಬಸವರಾಜ ದಲಾಲ ಅಧ್ಯಕ್ಷತೆ ವಹಿಸಿ, ಕಸಾಪ ಮೂಲಕ ತಾಲೂಕಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಿರಂತರ ಸಾಗಿರುವುದು ಗಮನಾರ್ಹವಾಗಿದೆ. ತಾವು ಸದಾಕಾಲವೂ ಕಾರ್ಯಕ್ರಮಗಳಿಗೆ ಪ್ರೋತ್ಸಾಹ, ಸಹಕಾರ, ನೆರವು ನೀಡಲಾಗುವುದು ಎಂದರು.
ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಮಾತನಾಡಿ, ಸಾಹಿತ್ಯ ಕೃತಿಗಳು ಉಪದೇಶ ಮಾಡುವುದಿಲ್ಲ, ಚಿಂತನೆಗೆ ದಾರಿ ಮಾಡಿಕೊಡುತ್ತವೆ. ಪುಸ್ತಕಗಳನ್ನು, ಪತ್ರಿಕೆಗಳನ್ನು ಖರೀದಿಸಿ ಓದಬೇಕು ಎಂದರು.ಅರ್ಥಶಾಸ್ತ್ರಜ್ಞ ಎಂ.ಎಸ್. ಬದಾಮಿ, ಪತ್ರಕರ್ತ ರವೀಂದ್ರ ಅಷ್ಟಗಿ, ದಾಕ್ಷಾಯಣಿ ಮಂಡಿ, ಮಹಾದೇವ ಕವಿಶೆಟ್ಟಿ, ದಾನಪ್ಪ ಆಸಂಗಿ, ಶರತ್ ಜಂಬಗಿ, ಈರಣ್ಣ ತೇರಣಿ ಸಂವಾದದಲ್ಲಿ ಮಾತನಾಡಿ, ಸಾಹಿತ್ಯಾಸಕ್ತರ ಗಮನ ಸೆಳೆದ ಪುಸ್ತಕ ಅವಲೋಕನದಲ್ಲಿ ಯುವ ಬರಹಗಾರರು ಭಾಗವಹಿಸಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಾಹಿತ್ಯ ಪರಿಷತ್ತು ನವನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ದತ್ತಿನಿಧಿ, ತಾಲೂಕು ಸಾಹಿತ್ಯ ಸಮ್ಮೇಳನ, ಕಾವ್ಯಕಮ್ಮಟ, ಗೀತಗಾಯನ ಶಿಬಿರ, ಮಹಿಳಾ ಕವಿಗೋಷ್ಠಿ ಆಯೋಜಿಸಲಿದೆ ಎಂದರು.ಸುಜಾತಾ ಗೌಡರ ಪ್ರಾರ್ಥಿಸಿದರು. ಬಸವರಾಜ ಮೇಟಿ ನಿರೂಪಿಸಿದರು. ಶಿವಾನಂದ ದಾಶಾಳ ವಂದಿಸಿದರು. ಹಿರಿಯ ಸಾಹಿತಿ ಜಿ. ಎಸ್. ವಡಗಾಂವಿ, ಮಲಕಪ್ಪ ಜವಳಗಿ, ಕಲಾವಿದ ಮಲ್ಲಪ್ಪ ಗಣಿ, ಡಾ. ಜಿ. ಎಚ್. ಚಿತ್ತರಗಿ, ಈರಣ್ಣ ಗಣಮುಖಿ, ಮಲ್ಲೇಶಪ್ಪ ಕುಚನೂರ, ಚನ್ನಮಲ್ಲ ಕರಡಿ, ಅಶೋಕ ಕರಡಿ, ರೇವಣಸಿದ್ಧ ಗೌಡರ, ಬಸವರಾಜ ಬುಟ್ಟಣ್ಣವರ ಇನ್ನಿತರರು ಪಾಲ್ಗೊಂಡಿದ್ದರು.