ಹೊನ್ನಾವರ: ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ದೊರೆತಾಗ, ಆ ಮಗು ಸಮಾಜದಲ್ಲಿ ಉತ್ತಮ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನುಡಿದರು.
ಸ್ವರ್ಣವಲ್ಲಿ ರಾಮ ಕ್ಷತ್ರಿಯ ಪರಿಷದ್ ಹಾಗೂ ರಾಮಕ್ಷತ್ರಿಯ ಸಂಘ ಅಡಕಾರ ಇವುಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಉಪನಯನವನ್ನು ಕೂಡ ಚಿಕ್ಕ ವಯಸ್ಸಿನಲ್ಲಿ ಮಾಡುವುದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ, ಸಂಸ್ಕಾರಯುತ ಸಮಾಜ ನಿರ್ಮಾಣದ ಜವಾಬ್ದಾರಿ ಕೂಡ ಪಾಲಕರ ಮೇಲಿದೆ ಎನ್ನುವುದನ್ನು ಅರಿಯಬೇಕಾಗಿದೆ ಎಂದರು.
ಭಗವದ್ಗೀತೆ, ರಾಮರಕ್ಷಾ ಸ್ತೋತ್ರ ಮತ್ತು ರಾಮ ತಾರಕ ಮಂತ್ರಗಳ ಪಠಣ ಮಾಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ರೂಢಿಸಿದಾಗ ಮಕ್ಕಳಲ್ಲಿ ಆಧ್ಯಾತ್ಮಿಕ ಒಲವು ಮೂಡಲು ಸಾಧ್ಯ. ಅಲ್ಲದೇ ಈ ಆಧ್ಯಾತ್ಮಿಕ ಒಲವು ಸಂಸ್ಕಾರಯುತ ಮನುಷ್ಯನನ್ನು ನಿರ್ಮಾಣ ಮಾಡುತ್ತದೆ ಎಂದರು. ಪ್ರತಿವರ್ಷ ದಂಪತಿಗಳ ಶಿಬಿರ, ಯೋಗ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ರಾಮಕ್ಷತ್ರಿಯ ಸಮಾಜದ 33 ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು.
ರಾಮಕ್ಷತ್ರಿಯ ಪರಿಷದ್ ಅಧ್ಯಕ್ಷ ಎಸ್.ಕೆ. ನಾಯ್ಕ ಮಾತನಾಡಿ, ಸ್ವರ್ಣವಲ್ಲೀ ಮಠಾಧೀಶರ ಮಾರ್ಗದರ್ಶನದಲ್ಲಿ ರಾಮಕ್ಷತ್ರಿಯ ಪರಿಷದ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳ ಮೂಲಕ ಸಂಘಟಿತರಾಗೋಣ ಎಂದರು.ಪರಿಷದ್ ನ ಅಧ್ಯಕ್ಷ ಎಸ್.ಕೆ. ನಾಯ್ಕ ಮತ್ತು ಶ್ರೀನಿವಾಸ ನಾಯ್ಕ ಮುಂಬಯಿ ಅವರನ್ನು ಅಡಕಾರ ಸಂಘದಿಂದ ಸನ್ಮಾನಿಸಲಾಯಿತು.ಸೀತಾರಾಮ ನಾಯ್ಕ ಹಳದಿಪುರ ಪ್ರಾರ್ಥಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಮೋದ ನಾಯ್ಕ ಸ್ವಾಗತಿಸಿದರು. ಅಡಕಾರ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ರಾಮದಾಸ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷದ್ ನ ಪ್ರಧಾನ ಕಾರ್ಯದರ್ಶಿ ರಾಜೇಶ ಸಾಳೇಹಿತ್ತಲ್ ಐದು ವರ್ಷಗಳ ವರದಿ ವಾಚಿಸಿದರು. ರವಿ ನಾಯ್ಕ ನಿರೂಪಿಸಿದರು. ಮಹೇಶ ನಾಯ್ಕ ವಂದಿಸಿದರು.