ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೆದ್ದಾರಿಯಲ್ಲಿ ಕನಿಷ್ಠ 60 ಕಿಲೋಮೀಟರ್‌ಗೆ ಒಂದು ಟೋಲ್ ಗೇಟ್ ಅಳವಡಿಸಬೇಕು. ಆದರೆ, ಶಿವಮೊಗ್ಗ- ಶಿರಾಳಕೊಪ್ಪ ರಸ್ತೆಯಲ್ಲಿ 35 ಕಿಲೋಮೀಟರ್‌ಗೆ ಟೋಲ್ ಗೇಟ್ ಅಳವಡಿಸಲಾಗಿದೆ. ಇದರಿಂದ ಹುಬ್ಬಳ್ಳಿಯಿಂದ ಶಿವಮೊಗ್ಗ ಬರುವವರಿಗೆ ಮಾತ್ರವಲ್ಲ, ಸ್ಥಳೀಯರಿಗೂ ಇದರಿಂದ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಪದತ್ಯಾಗ ಮಾಡಲಿ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು. ಅಹಿಂದ ಎಂದು ಭಾಷಣ ಮಾಡುವ ಅವರು, ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಬಯಲಿಗೆಳೆದು ಆತ್ಮಹತ್ಯೆ ಮಾಡಿ ಕೊಂಡಿರುವ ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಆಪರೇಷನ್ ಕಮಲ ವಿಚಾರದಲ್ಲಿ ಶಾಸಕ ಗಣಿಗ ರವಿ ಅವರ ಆರೋಪದಲ್ಲಿ ಹುರುಳಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿ. ಕೆ.ಶಿವಕುಮಾರ್ ಅವರನ್ನು ಮೆಚ್ಚಿಸಲು ಇಂತಹ ಹೇಳಿಕೆ ನೀಡಿದ್ದಾರೆ. ಯಾರು ಯಾರಿಗೆ ಎಲ್ಲಿ ಆಮಿಷ ಒಡ್ಡಿದ್ದಾರೆಂಬುದನ್ನು ರವಿ ಬಹಿರಂಗಪಡಿಸಬೇಕು. ಇಲ್ಲದಿದ್ದಲ್ಲಿ ಅವರು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನಮ್ಮ ನಾಯಕರು ಹೇಳಿದ್ದಾರೆ ಎಂದು ತಿಳಿಸಿದರು.
ಜೋಗ ಜಲಪಾತದಲ್ಲಿ ಪ್ರವಾಸಿಗರಿಗೆ ದರ ಹೆಚ್ಚಳ ಮಾಡೋದು ತಪ್ಪಲ್ಲ. ಅಭಿವೃದ್ಧಿ ದೃಷ್ಟಿಯಿಂದ ದರ ಹೆಚ್ಚು ಮಾಡಿದ್ದಾರೆ. ಜೋಗ ಜಲಪಾತದಲ್ಲಿ ಈಗ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಅಲ್ಲಿ ಬರುವ ಪ್ರವಾಸಿಗರಿಗೆ ಹೋಟೆಲ್, ಶೌಚಾಲಯ ವ್ಯವಸ್ಥೆ ಇಲ್ಲ. ಇನ್ನು 2-3 ತಿಂಗಳಲ್ಲಿ ಹೋಟೆಲ್, ಶೌಚಾಲಯ ನಿರ್ಮಾಣ ಆಗಲಿದೆ. ಆದರೆ, ಅಭಿವೃದ್ಧಿ ಕಾಮಗಾರಿ ಮುಗಿದ ನಂತರ ದರ ಹೆಚ್ಚಳ ಮಾಡಬಹುದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿ.ವೈ. ರಾಘವೇಂದ್ರ, ಸಂಸದ.