ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬಿಡುಗಡೆ ಮಾಡುವ ಸಾಲವನ್ನೇ ರೈತರಿಗೆ ನೀಡುವುದು, ವಸೂಲಿ ಮಾಡುವುದೇ ಸಹಕಾರ ಸಂಘಗಳ ಉದ್ದೇಶವಾಗಿರದೇ, ಸ್ವಂತ ಬಂಡವಾಳ ರೂಪಿಸಿಕೊಂಡು, ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸುವತ್ತಲೂ ಗಮನ ಹರಿಸಬೇಕು ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್.ನಂಜುಂಡೇಗೌಡ ಕರೆ ನೀಡಿದರು.ನಗರದ ಜನತಾ ಬಜಾರ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಹರಿಹರ, ಹೊನ್ನಾಳಿ, ನ್ಯಾಮತಿ ಹಾಗೂ ಜಗಳೂರು ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳಿಗೆ ಸ್ವಂತ ಬಂಡವಾಳ ರೂಪಿಸಿ, ಆರ್ಥಿಕವಾಗಿ ಸದೃಢಗೊಳಿಸಲು ಕಾರ್ಯ ನಿರ್ವಹಣಾಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.
ನಬಾರ್ಡ್ ಒಂದು ವೇಳೆ ಡಿಸಿಸಿ ಬ್ಯಾಂಕ್‌ಗಳಿಗೆ ಹಣವನ್ನು ನೀಡದಿದ್ದರೆ ಸಹಕಾರ ಸಂಘಗಳು ದೊಡ್ಡ ಸಮಸ್ಯೆಗೆ ಸಿಲುಕುತ್ತವೆಂಬುದನ್ನು ಮರೆಯಬಾರದರು. ಹಾಗಾಗಿ ಇತರೆ ಆರ್ಥಿಕ ಚಟುವಟಿಕೆಗಳನ್ನು ರೂಪಿಸಿಕೊಂಡು, ಸ್ವಂತ ಬಂಡವಾಳ ಹೊಂದಬೇಕು. ಸ್ವಂತ ಬಂಡವಾಳ ಹೊಂದುವುದಕ್ಕೆ ಸಾಕಷ್ಟು ಅವಕಾಶಗಳೂ ಇದೆ. ಈ ನಿಟ್ಟಿನಲ್ಲಿ ಸಹಕಾರ ಸಂಘಗಳ ಕಾರ್ಯ ನಿರ್ವಹಣಾಧಿಕಾರಿಗಳು ಚಿಂತನೆ ನಡೆಸಬೇಕು, ಹೊಸ ಆಲೋಚನೆ ಮಾಡಬೇಕು ಎಂದು ತಿಳಿಸಿದರು.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕ ಜೆ.ಎಸ್.ವೇಣುಗೋಪಾಲ ರೆಡ್ಡಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿರುವ ಹೊಸ ಕಾನೂನುಗಳಿಗೆ ಹೊಂದಿಕೊಳ್ಳಲು ಸಹಕಾರಿ ಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಸಹಕಾರ ಸಂಸ್ಥೆ ನಡೆಸುವುದೇ ಕಷ್ಟಕರವಾಗಿದೆ. ಇಲಾಖೆ ಮತ್ತು ಲೆಕ್ಕ ಪರಿಶೋಧಕರು ಇಬ್ಬರ ಬಳಿಯೂ ಲೆಕ್ಕ ಪರಿಶೋಧನೆ ಮಾಡಿಸುವುದು ಮುಖ್ಯ ಕಾರ್ಯ ನಿರ್ವಾಹಕರಿಗೆ ತೊಂದರೆಯಾಗುತ್ತಿದೆ. ಬೆಂಗಳೂರಲ್ಲಿ ನಡೆದ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆದಿದ್ದು, ಈ ಬಗ್ಗೆ ಗಂಭೀರವಾಗಿ ಸ್ಪಂದಿಸಬೇಕಿದ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಕುಮಾರ ಮಾತನಾಡಿ, ಇಂತಹ ತರಬೇತಿ ಶಿಬಿರಗಳನ್ನು ವರ್ಷಕ್ಕೊಮ್ಮೆ ನಡೆಸುವ ಬದಲಿಗೆ ಪ್ರತಿ 6 ತಿಂಗಳಿಗೊಮ್ಮೆ ನಡೆಸಿದರೆ ಸಹಕಾರ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಸಹಕಾರ ಸಂಘಗಳ ಅಭಿವೃದ್ಧಿಗೆ ನಮ್ಮೆಲ್ಲರ ಸಹಕಾರ ಸ್ಪಂದನೆ, ಸದಾ ಇರುತ್ತದೆ ಎಂದು ಹೇಳಿದರು.ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಡಿ.ಎಂ.ಮುರಿಗೇಂದ್ರಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಕೆ.ಜಿ. ನವೀನ ಕುಮಾರ, ಸುನೀತಾ, ಹರೀಶ, ಜಿಲ್ಲಾ ಸಹಕಾರ ಶಿಕ್ಷಕ ಕೆ.ಎಚ್.ಸಂತೋಷಕುಮಾರ, ವ್ಯವಸ್ಥಾಪಕ ಕೆ.ಎಂ.ಜಗದೀಶ, ದ್ವಿತೀಯ ದರ್ಜೆ ಸಹಾಯಕ ವಿ.ರಂಗನಾಥ ಮತ್ತು ಸಿಬ್ಬಂದಿ ಇದ್ದರು. ಸಹಕಾರ ಸಂಸ್ಥೆಗಳಿಗೆ ಅನ್ವಯಿಸುವ ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ ಕುರಿ ತು ಸನ್ನದು ಲೆಕ್ಕ ಪರಿಶೋಧಕ ಉಮೇಶ ಶೆಟ್ಟಿ ತರಬೇತಿ ನೀಡಿದರು. ಸಹಕಾರ ಸಂಘಗಳ ಚುನಾವಣೆ ಪ್ರಕ್ರಿಯೆ ಮತ್ತು ಸಹಕಾರ ಸಂಘಗಳಿಗೆ ಅನ್ವಯಿಸುವ ವಿವಿಧ ಕಾಯಿದೆ ಮತ್ತು ನಿಯಮಗಳ ಕುರಿತು ನಿವೃತ್ತ ಸಹಾಯಕ ನಿಬಂಧಕ ಲಿಯಾಖತ್ ಅಲಿ ಮಾತನಾಡಿದರು.