ಅರಕಲಗೂಡು: ವೀರಶೈವ ಲಿಂಗಾಯತ ಜನೋಪಯೋಗಿ ಸೌಹಾರ್ದ ಸಹಕಾರಿ ಸಂಘ 2024- 25ನೇ ಸಾಲಿಗೆ 4 ಲಕ್ಷ ರು. ನಿವ್ವಳ ಲಾಭ ಗಳಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಎನ್. ರವಿಕುಮಾರ್ ತಿಳಿಸಿದರು. ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಹಕರಿಗೆ ವಿವಿಧ ಉದ್ದೇಶಗಳಿಗಾಗಿ ಸಂಘವು 100 ಕೋಟಿ ರು. ಸಾಲ ನೀಡಿದೆ. ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದು ಮುಂದಿನ ದಿನಗಳಲ್ಲಿಯೂ ಉತ್ತಮ ಸೇವೆ ನೀಡುವ ಉದ್ದೇಶ ಹೊಂದಿದೆ. ಸಂಘದ ಉನ್ನತಿಗೆ ಗ್ರಾಹಕರು ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಪಟ್ಟಣದ ಮಲ್ಲಿಪಟ್ಟಣ ರಸ್ತೆಯಲ್ಲಿ ಹೊಸದಾಗಿ ಸ್ಥಾಪಿಸಿರುವ ಕಚೇರಿ ಹಾಗೂ ಸಿಎಸ್‌ಸಿ ಕೇಂದ್ರವನ್ನು ಸೆ. 26ರಂದು ಉದ್ಘಾಟಿಸಲಾಗುವುದು ಎಂದರು. ರಾಜ್ಯ ಸೌಹಾರ್ದ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ರಾಜ್ಯದಲ್ಲಿ 6 ಸಾವಿರ ಸೌಹಾರ್ದ ಸಹಕಾರಿ ಸಂಘಗಳಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿವೆ. ಇಲ್ಲಿಯ ಸಂಘದ ಕಾರ್ಯನಿರ್ವಹಣೆ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.