ಕನ್ನಡಪ್ರಭ ವಾರ್ತೆ, ಚನ್ನಗಿರಿ
ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿಟ್ಟು ನೋಡುವ ಪವಿತ್ರವಾದ ಭಾರತೀಯ ಸಂಸ್ಕೃತಿಯು ನಮ್ಮದಾಗಿದೆ. ಹೀಗಿರುವಾಗ ಬಿಜೆಪಿಯ ನಾಯಕ ಸಿ.ಟಿ.ರವಿ ಅವರು ಸಚಿವ ಶಿವರಾಜ್ ತಂಗಡಗಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ತಾಲೂಕು ಭೋವಿ ಸಮಾಜ ಅಧ್ಯಕ್ಷ ಗರಗ ರಾಜಪ್ಪ ದೂರಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವ ತಂಗಡಗಿ ಅವರು ಭೋವಿ ಸಮುದಾಯದ ಏಕೈಕ ಸಚಿವರಾಗಿದ್ದಾರೆ. ಅವರ ತೇಜೋವಧೆ ಮಾಡುವಂತಹ ಮಾತನಾಡಿರುವುದು ಸರಿಯಲ್ಲ. ಸ್ತ್ರೀ ಕುಲಕ್ಕೆ ಅವಮಾನ ಆಗುವಂತಹ ಮಾತಾಡಿರುವ ಸಿ.ಟಿ.ರವಿ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಬೆಂಕಿಕೆರೆ ಹನುಮಂತಪ್ಪ ಮಾತನಾಡಿ, ನಮ್ಮ ಸಮಾಜ ಕಲ್ಲು ಬಂಡೆಗಳನ್ನು ಪುಡಿ ಮಾಡಿ ಜೀವನ ನಡೆಸುವ ಸಮಾಜವಾಗಿದೆ. ಲೂಟಿ ಮಾಡುವ ಸಮಾಜ ಅಲ್ಲ. ಕಷ್ಟಪಟ್ಟು ಜೀವನ ಮಾಡುತ್ತಿದ್ದೇವೆ. ಸಮುದಾಯದ ನಾಯಕ ಶಿವರಾಜ ತಂಗಡಗಿ ವಿರುದ್ಧ ಮಾತನಾಡಿರುವ ಸಿ.ಟಿ.ರವಿ ಕೂಡಲೇ ಸಮಾಜದ ಮುಂದೆ ಕ್ಷಮೆ ಕೇಳಬೇಕು ಎಂದರು.2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ನಮ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ಅದನ್ನು ಮರೆತು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿಯವರು ಮೊದಲು ಈ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿದು, ರಾಜಕಾರಣ ಮಾಡಬೇಕು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜ ಮುಖಂಡರಾದ ತಿಮ್ಮಪ್ಪ, ಅಂಜಿನಪ್ಪ, ಸಿದ್ರಾಮಪ್ಪ, ತಿಪ್ಪಾಭೋವಿ, ಗುರುವಾಭೋವಿ, ನಾಗಪ್ಪ ಹಾಜರಿದ್ದರು.- - - -31ಕೆಸಿಎನ್‌ಜಿ1:
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಭೋವಿ ಸಮಾಜ ಅಧ್ಯಕ್ಷ ಗರಗ ರಾಜಪ್ಪ ಮಾತನಾಡಿದರು.