ಕನ್ನಡಪ್ರಭ ವಾರ್ತೆ ಮಡಿಕೇರಿ
ವಿರಾಜಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಕೊಡಗು ಜಿಲ್ಲಾ ಕಾಂಗ್ರೆಸ್ ಚುನಾವಣಾ ಸಮಿತಿ ವತಿಯಿಂದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸನಾತನ ಧರ್ಮಮದ ತಳಹದಿಯ ಮೇಲೆ ರಾಜಕೀಯ ನಡೆಸುತ್ತಿರುವ ಮೋದಿ ಸರ್ಕಾರ ದಲಿತರ ಜೀವನವನ್ನು ಸುಖಮಯವಾಗಿಸುತ್ತೇನೆ ಎಂದರು. ಅದು ಆಗಲಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದರು ಸೃಷ್ಟಿಯೇ ಆಗಿಲ್ಲ ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ದೇಶವನ್ನು ಅಧೋಗತಿಯತ್ತ ಸಾಗಿಸಿದ್ದಾರೆ. ರೈತರನ್ನು ಶೋಷಿಸುತ್ತ ಅವರಿಂದ ಪ್ರತಿಭಟನೆಯ ಹಕ್ಕನ್ನು ಕೇಂದ್ರ ಸರ್ಕಾರ ಕಸಿದು ಕೊಂಡಿದೆ ಎಂದು ಯತೀಂದ್ರ ಟೀಕಿಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತತ್ವ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಬಿಜೆಪಿಯ ಶಾಸಕರ ಕೊಡುಗೆಗಳನ್ನು ನೋಡುವುದಾದರೆ ದೊಡ್ಡ ಶೂನ್ಯ. ಬಿಜೆಪಿಯು ಕೋಮುವಾದ ಮತೀಯತೆಯ ಮೂಲಕ ಪ್ರಜಾಪ್ರಭುತ್ವದ ಅಭಿವೃದ್ಧಿಯನ್ನು ತಡೆಯುವಂತಹ ಕಾರ್ಯ ಮಾಡುತ್ತಿದೆ ಎಂದರು.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಲೋಕಸಭಾ ಚುನಾವಣೆಯು ಸತ್ಯ ಮತ್ತು ಅಸತ್ಯದ ತಳಹದಿಯ ಮೇಲೆ ನೆಲೆನಿಂತಿದೆ. ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಕದನ ಸತ್ಯವನ್ನು ಎದುರಿಸಲಾಗದೆ ಸುಳ್ಳು ಸೋಲಲೇಬೇಕು. ಈ ಹಿಂದೆ ಇದ್ದಂತಹ ಶಾಸಕರ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ ಎಂದರು.
ಸಚಿವ ವೆಂಕಟೇಶ್, ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ಡಾ. ಪುಷ್ಪ ಅಮರ್ ನಾಥ್ , ಶಾಸಕ ಎ. ಎಸ್. ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ, ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚಯ್ಯ, ಅರುಣ್ ಮಾಚಯ್ಯ ಡಾ. ಶುಶ್ರುತ್ ಗೌಡ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
ವಿರಾಜಪೇಟೆಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಪ್ರಚಾರ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ತಮ್ಮ ಹೇಳಿಕೆ ಖಂಡಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಮಿತ್ ಶಾ ಅವರನ್ನ ರೌಡಿ ಎಂದು ನಾನೇ ಹುಟ್ಟಿಸಿಕೊಂಡು ಹೇಳಿದಂತಹ ಮಾತಲ್ಲ, ಈ ಹಿಂದೆ ಸಿಬಿಐ ಕೂಡ ಹೇಳಿತ್ತು. ಅಮಿತ್ ಶಾ ಅವರಿಗೆ ಕ್ರಿಮಿನಲ್ ಬ್ಯಾಗ್ರೌಂಡ್ ಇದೆ ಅಂತ ಹೇಳಿದೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಈ ಹತ್ತು ವರ್ಷಗಳಲ್ಲಿ ದೇಶವನ್ನು ಎಷ್ಟು ಹಾಳು ಮಾಡಲು ಸಾಧ್ಯವೋ ಅಷ್ಟು ಹಾಳುಮಾಡಿದ್ದಾರೆ. ಮೋದಿ ಸರ್ಕಾರದ ಬಂದ ಮೇಲೆ ನಮ್ಮ ದೇಶ 25 ವರ್ಷ ಹಿಂದಕ್ಕೆ ಹೋಗಿದೆ. ಕೇಂದ್ರ ಸರ್ಕಾರ ಈ ಹಿಂದೆ ಜನರಿಗೆ ಏನು ಭರವಸೆ ನೀಡಿತ್ತೋ ಅದನ್ನು ನೆರವೇರಿಸಿಲ್ಲ ಎಂದು ಯತೀಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ 400ಕ್ಕೂ ಹೆಚ್ಚು ಸೀಟ್‌ಗಳನ್ನ ಗೆದ್ದು ಬರುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. 400ಕ್ಕೂ ಹೆಚ್ಚು ಸೀಟ್ ಯಾಕೆ ಬೇಕು ಅಂತ ಅವರ ಪಕ್ಷದ ಅನಂತ್ ಕುಮಾರ್ ಹೆಗಡೆ ಅವರೇ ಸತ್ಯ ಬಿಚ್ಚಿಟ್ಟಿದ್ದಾರೆ. ಆದ್ದರಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ. ದೇಶದಲ್ಲಿ ಸರ್ವಾಧಿಕಾರ ಸರ್ಕಾರ ಆಡಳಿತಕ್ಕೆ ಬರುತ್ತದೆ. ಸಮಾನತೆ ಹೋಗಿ ಅಸಮಾನತೆ ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಐವತ್ತು ವರ್ಷಗಳಲ್ಲಿ ರಾಜಕೀಯ ಎದುರಾಳಿಗಳನ್ನೇ ಸಂಸ್ಥೆಗಳ ಬಳಸಿ ಅವರ ಕೈ ತಿರುಚಲಾಗುತ್ತಿದೆ. ಅವರ ಕುತ್ತಿಗೆಯನ್ನು ಇಚುಕುವಂತಹ ಕೆಲಸ ಮಾಡಲಾಗುತ್ತಿದೆ. ಎಲ್ಲೋ ಒಂದುಕಡೆ ದೇಶ ಸರ್ವಾಧಿಕಾರಿ ಎಡೆಗೆ ಹೆಜ್ಜೆ ಇಡುತ್ತಿದೆ. ಇದು ಈ ದೇಶದ ದೌರ್ಭಾಗ್ಯ. ಇಡಿ, ಐಟಿಗಳನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಎಚ್ಚರಿಸಿದೆ. ಈ ಸಂಸ್ಥೆಗಳು ಆಳುವ ಜನರ ಕೈಗೊಂಬೆಗಳಾಗಬಾರದು ಎಂದು ಮಹದೇವಪ್ಪ ಹೇಳಿದರು.