ಕನಕಪುರ: ಕೇವಲ ಟೈಟಲ್ ಬದಲಾವಣೆಯಿಂದ ಚಿತ್ರದ ಕಥೆ ಏನು ಬದಲಾಗುವುದಿಲ್ಲವೋ ಹಾಗೆ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ಮೊದಲು ಜಿಲ್ಲೆಯ ಅಭಿವೃದ್ಧಿ ಕಡೆ ಗಮನಹರಿಸಲಿ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ನಾಗರಾಜು ತಿಳಿಸಿದರು.
ನಿಮಗೆ ರಾಜಕೀಯ ಶಕ್ತಿ ನೀಡಿದ ಸಾತನೂರು ಹೋಬಳಿ ಕೇಂದ್ರವನ್ನು ಆ ಭಾಗದ ಜನರ ಬಹುದಿನಗಳ ಕನಸಾದ ತಾಲೂಕು ಕೇಂದ್ರವಾಗಿ ಮಾಡಲು ಆಗದ ನೀವು ನಿಮ್ಮ ಹಾಗೂ ನಿಮ್ಮ ಹಿಂಬಾಲಕರ ಅಭಿವೃದ್ಧಿಗಾಗಿ ಐತಿಹಾಸಿಕ ರಾಮನ ಜಿಲ್ಲೆ ಹೆಸರನ್ನು ಬದಲಾವಣೆ ಮಾಡಿರುವುದಾಗಿ ಆರೋಪಿಸಿದರು.
ಜೆಡಿಎಸ್ ಯುವ ಮುಖಂಡ ಭರತ್ ಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮಗೆ ರಾಜಕೀಯವಾಗಿ ಶಕ್ತಿ ನೀಡಿದ ಜಿಲ್ಲೆಯ ರೈತರು, ಜನರ ಋಣ ತೀರಿಸಲು ತಮ್ಮ ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬೇರ್ಪಡಿಸಿ ರಾಮನಗರ ಜಿಲ್ಲೆ ಮಾಡಿದರು. ಆಗಲೇ ಬೆಂಗಳೂರು ದಕ್ಷಿಣ ಎಂದು ಹೆಸರಿಡಬಹುದಿತ್ತು. ಆದರೆ ರಾಮನಗರಕ್ಕೆ ಇರುವ ಇತಿಹಾಸ ಹಾಗೂ ಪೌರಾಣಿಕ ಮಹತ್ವ ಅಳಿಸಬಾರದು ಎಂಬ ಜಿಲ್ಲೆಯ ಜನರ ಭಾವನೆಗೆ ಗೌರವ ನೀಡಿ ರಾಮನಗರ ಜಿಲ್ಲೆಯ ಹೆಸರು ಇಟ್ಟಿರುವುದನ್ನು ಸಹಿಸಿದ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿಗಳು ಸೇಡಿನ ರಾಜಕಾರಣದ ಜೊತೆಗೆ ಜಿಲ್ಲೆಯ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್ ಮಹಿಳಾ ಘಟಕದ ನಾಯಕಿ ರತ್ನಮ್ಮ ಮಾತನಾಡಿ, ರಾಮನಗರ ಜನರ ಹೃದಯದಲ್ಲಿ ಸದಾ ನೆಲೆಸಿರುವ ಕುಮಾರಸ್ವಾಮಿಯವರ ಮೇಲಿನ ದ್ವೇಷ ಹಾಗೂ ಅಸೂಯೆಯಿಂದ ನಮ್ಮ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿದ್ದಾರೆಯೇ ಹೊರತು ಅಭಿವೃದ್ಧಿಗಾಗಿ ಅಲ್ಲ ಎಂಬುದು ಜಿಲ್ಲೆಯ ಸಾಮಾನ್ಯರಿಗೂ ಅರಿವಿದ್ದು ಸತತವಾಗಿ ಶಾಸಕರಾಗಿ ಆರಿಸಿ ಬಂದಿರುವ ನೀವು ಒಂದೇ ಒಂದು ಶಾಶ್ವತ ನೀರಾವರಿ ಯೋಜನೆಯಾಗಲೀ, ಕೈಗಾರಿಕೆಯಾಗಲೀ ತರದೆ ನಿಮ್ಮ ಹಿಂಬಾಲಕರ ಭೂ ಮಾಫಿಯಾಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿದ್ದು ನಿಮಗೆ ನಿಜವಾಗಲೂ ಜಿಲ್ಲೆಯ ಹಾಗೂ ಕ್ಷೇತ್ರದ ಜನರ ಮೇಲೆ ಗೌರವ, ಕಾಳಜಿ ಇದ್ದರೆ ಬಿಡದಿ ಬಳಿಯ ಟೌನ್‌ಶಿಪ್ ಕೈಬಿಟ್ಟು ಸಾತನೂರು ಕೇಂದ್ರವನ್ನು ಮಾಡಿ ತೋರಿಸಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಸದಸ್ಯ ಸೈಯದ್ ಸಮೀರ್, ಜೆಡಿಎಸ್ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಪವಿತ್ರಾ, ಬಿಜೆಪಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ತಹಸೀನಾ ಖಾನಂ, ಶಾಂತಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತಿಮ್ಮಪ್ಪತಾ. ಪ್ರ. ಕಾರ್ಯದರ್ಶಿ ಅಶ್ವಥ್ ನಾರಾಯಣ್, ಮುಖಂಡ ಮರೀಗೌಡ, ಜೆಡಿಎಸ್ ಮುಖಂಡ ಕಾಳೇಗೌಡ, ಶಿವಗೂಳಿಗೌಡ, ಅನು ಕುಮಾರ್, ಯೂನಿಸ್ ಖಾನ್ ಸೇರಿದಂತೆ ಬಿಜೆಪಿ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರದಲ್ಲಿ ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರುದ್ಧ ಮೈತ್ರಿ ಕೂಟ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.