ಗೋಕಾಕ : ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಎನ್‌ಎಸ್‌ಎಫ್ ಕಚೇರಿಯಲ್ಲಿ ಶುಕ್ರವಾರ ನಡೆದ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಳೆಯ ಮಾರ್ಚ್ ತಿಂಗಳಿನಿಂದ ಬೇಸಿಗೆಯು ಆರಂಭವಾಗಲಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತವು ಮುತುವರ್ಜಿ ವಹಿಸುವಂತೆ ಸೂಚಿಸಿದರು. ಮಾರ್ಚ್‌ನಿಂದ ಮುಂದಿನ 3 ತಿಂಗಳು ಕಾಲ ಬೇಸಿಗೆಯು ಇರಲಿದ್ದು, ಅಂಥ ಸಂದರ್ಭದಲ್ಲಿ ಅಧಿಕಾರಿಗಳು ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೆಲಸ ನಿರ್ವಹಿಸಬೇಕು. ಅವಶ್ಯವಿದ್ದಲ್ಲಿ ಟ್ಯಾಂಕರ್ ಮೂಲಕವೂ ನೀರು ಸರಬುರಾಜು ಮಾಡಲು ಅಗತ್ಯವಿರುವ ಎಲ್ಲ ಕ್ರಮಕ್ಕೆ ಸೂಚಿಸಿದರು.
ಜೆಜೆಎಂ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಈ ಯೋಜನೆಯ ಕಾಮಗಾರಿಗಳು ಪೈಪ್‌ಲೈನ್ ಮತ್ತು ಒಎಚ್ಟಿ ನಿರ್ಮಾಣ ಮಾಡಿದ್ದು, ಸಾರ್ವಜನಿಕರಿಗೆ ಇದುವರೆಗೂ ಮನೆಗಳಿಗೆ ಸರಬುರಾಜು ಆಗಿಲ್ಲ. ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಈ ಕಾಮಗಾರಿಗಳಿಂದ ಆಯಾ ಗ್ರಾಮಗಳ ರಸ್ತೆಗಳು ಸಹ ಹದಿಗೆಟ್ಟಿದ್ದು, ಇವುಗಳನ್ನು ದುರಸ್ತಿ ಕಾರ್ಯ ಮಾಡಬೇಕು. ಲೋಕೋಪಯೋಗಿ ಇಲಾಖೆಯ ಎಲ್ಲ ಕಾಮಗಾರಿಗಳನ್ನು ತುರ್ತಾಗಿ ಗುಣಮಟ್ಟದಿಂದ ಕೈಗೆತ್ತಿಕೊಳ್ಳಬೇಕು. ಕಾಮಗಾರಿಗಳ ಸ್ಥಳಕ್ಕೆ ಸ್ವತಃ ಅಧಿಕಾರಿಗಳೇ ಭೇಟಿ ನೀಡಬೇಕು. ಅಪೂರ್ಣಗೊಂಡ ಕಾಮಗಾರಿಗಳನ್ನು ನವೆಂಬರ್- ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಮೃತ 2.0 ಯೋಜನೆಯಡಿ ಅರಭಾವಿ, ಕಲ್ಲೋಳಿ, ನಾಗನೂರ, ಮೂಡಲಗಿ ಪಟ್ಟಣಗಳಿಗೆ ₹140.69 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ 1 ವರ್ಷದೊಳಗೆ ಇದು ಪೂರ್ಣಗೊಳ್ಳಲಿದೆ. ಇದರಿಂದ ಈ ಪಟ್ಟಣಗಳ ಜನರ ಕುಡಿಯುವ ನೀರಿನ ಸಮಸ್ಯೆಯು ಇತ್ಯರ್ಥವಾಗಲಿದೆ. ಗುಣಮಟ್ಟದ ಕಾಮಗಾರಿ ಬಗ್ಗೆ ಅಧಿಕಾರಿಗಳು ನಿಗಾವಹಿಸುವಂತೆ ಸೂಚಿಸಿದರು. ಸುಮಾರು 1350 ಮನೆಗಳು ಮಂಜೂರಾಗಿದ್ದು, ಅರ್ಹ ಬಡ ಕುಟುಂಬಗಳನ್ನು ಗುರುತಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಬಡ ಕುಟುಂಬಗಳಿಗೆ ಅನ್ಯಾಯ ಆದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗುಡುಗಿದರು.
ಮೆಳವಂಕಿ ಗ್ರಾಮದಲ್ಲಿ ಇತ್ತೀಚೆಗೆ ಆಹಾರ ವಿಷಪೂರಿತವಾಗಿ ಕೆಲವು ಜನ ಅಸ್ತವ್ಯಸ್ತಗೊಂಡಿದ್ದು, ಯಾವೊಬ್ಬ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿಯೇ ಇರುವುದಿಲ್ಲವೆಂಬ ವ್ಯಾಪಕ ದೂರುಗಳು ಗ್ರಾಮಸ್ಥರಿಂದ ಬರುತ್ತಿದ್ದು, ಅಂತಹ ವೈದ್ಯಾಧಿಕಾರಿ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು. ಬೇಸಿಗೆಯ ಸಮಯದಲ್ಲಿಯೂ ಕೆಲ ಸಾಂಕ್ರಾಮಿಕ ರೋಗಗಳು ಬರದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಿಲಕುಂದಿಗೆ ಸ್ಥಳಾಂತರ ಮಾಡುವಂತೆಯೂ ಶಾಸಕರು ಸೂಚಿಸಿದರು.
20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೂಡಲೇ ಆರಂಭಿಸಬೇಕು. ಲಕ್ಷ್ಮೇಶ್ವರ ಮತ್ತು ಹೊನಕುಪ್ಪಿ ಗ್ರಾಮಗಳ ರೈತರಿಗೆ ಹಿಡಕಲ್ ಜಲಾಶಯದಿಂದ ನೀರು ಹೋಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಜಮೀನುಗಳಿಗೆ ನೀರು ಹಾಯಿಸಲು ಯೋಜನೆ ರೂಪಿಸಬೇಕು ಎಂದು ಹೇಳಿದರು.
ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಮತ್ತು ಅಭ್ಯಾಸಕ್ಕೆ ಅಡಚನೆಯಾಗದಂತೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತಾಗಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಮುಂದಿನ ಅನಾಹುತ ತಡೆಯುವಂತೆ ಖಡಕ್ ಸೂಚನೆ ನೀಡಿದರು.
ಗೋಕಾಕ ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಮೂಡಲಗಿ ತಹಸೀಲ್ದಾರ್ ಶಿವಾನಂದ ಬಬಲಿ, ಗೋಕಾಕ ತಾಪಂ ಇಒ ಪರಶುರಾಮ ಗಸ್ತಿ, ಮೂಡಲಗಿ ತಾಪಂ ಇಒ ಎಫ್‌ಜಿ ಚಿನ್ನನ್ನವರ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಘಟಪ್ರಭಾ ಸಿಪಿಐ ಎಚ್.ಡಿ.ಮುಲ್ಲಾ ಸೇರಿದಂತೆ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.