ರವೀಂದ್ರ ಹೆಗಡೆ ಅಭಿಪ್ರಾಯ। ಕಾನೂನು ಅರಿವು-ನೆರವು’ ಕಾರ್ಯಕ್ರಮ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ನೆರವು ಹಾಗೂ ಅರಿವು ತಲುಪಿಸುವಲ್ಲಿ ಪ್ಯಾರಾ ಲೀಗಲ್ ವಾಲಂಟಿಯರ್‌ಗಳ (ಪಿಎಲ್‌ವಿ) ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಅಭಿಪ್ರಾಯಪಟ್ಟರು.ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ಪ್ಯಾರಾ ಲೀಗಲ್ ವಾಲಂಟಿಯರ್‌ಗಳಿಗೆ ಹಮ್ಮಿಕೊಳ್ಳಲಾಗಿದ್ದ ’ಕಾನೂನು ಅರಿವು-ನೆರವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಳೆದ ಫೆಬ್ರವರಿಯಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ನಾವೆಲ್ಲರೂ ಸೇರಿ ಸಾರ್ವಜನಿಕರಿಗೆ ಕಾನೂನು ಜಾಗೃತಿ ಮೂಡಿಸು ವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂಬುದರ ಕುರಿತು ಪ್ರತಿಯೊಬ್ಬರೂ ಸ್ವಯಂ ವಿಮರ್ಶೆ ಮಾಡಿ ಕೊಳ್ಳುವ ಅಗತ್ಯವಿದೆ. ಜಿಲ್ಲೆಯಲ್ಲಿ ಸುಮಾರು ೯೨ಕ್ಕೂ ಹೆಚ್ಚು ಪ್ಯಾರಾ ಲೀಗಲ್ ವಾಲಂಟಿಯರ್‌ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದೀರಿ. ಮುಂಬರುವ ಸೆ. ೨೦ ಮತ್ತು ೨೧ ರಂದು ನಿಮಗಾಗಿ ಮತ್ತಷ್ಟು ಪ್ರಭಾವಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.ಪಿಎಲ್‌ವಿಗಳು ಕೇವಲ ಸಾಂಪ್ರದಾಯಿಕ ಕಾರ್ಯಗಳಿಗೆ ಸೀಮಿತರಾಗದೆ, ಸ್ವಯಂಸೇವಕರಾಗಿ ತಮ್ಮ ಗ್ರಾಮ ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಜನರು ಎದುರಿಸುತ್ತಿರುವ ನೈಜ ಸಮಸ್ಯೆ ಗುರುತಿಸಬೇಕು. ಸಾರ್ವಜನಿಕರಿಗೆ ಯಾವ ರೀತಿಯ ಕಾನೂನು ಅರಿವಿನ ಅಗತ್ಯವಿದೆ ಎಂಬುದನ್ನು ತಿಳಿದು ಆ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರಕ್ಕೆ ತಂದು ತಲುಪಿಸಬೇಕು. ಅಂತಹ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಹಾಗೂ ಕಾನೂನು ನೆರವು ಕೊಡಿಸಲು ಪ್ರಾಧಿಕಾರ ಬದ್ಧವಾಗಿದೆ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶ ಹನುಮಂತಪ್ಪ ಮಾತನಾಡಿ ಸಮಾಜದ ಕಟ್ಟಕಡೆ ಮತ್ತು ಬಡ ವರ್ಗದ ಜನರಿಗೆ ಸರಳ ಹಾಗೂ ಉಚಿತವಾಗಿ ಕಾನೂನು ನೆರವು ತಲುಪಿಸುವಲ್ಲಿ ಪ್ಯಾರಾ ಲೀಗಲ್ ವಾಲಂಟಿಯರ್‌ಗಳ (ಪಿಎಲ್‌ವಿ) ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.ಎರಡು ದಿನಗಳ ಕಾಲ ನಡೆಯಲಿರುವ ಈ ತರಬೇತಿಯಲ್ಲಿ ಮೊದಲ ದಿನದಂದು ಸರ್ಕಾರೇತರ ಸಂಸ್ಥೆಗಳ ಪಾತ್ರ ಮತ್ತು ಎನ್‌ಎಎಲ್‌ಎಸ್‌ಎ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಎರಡನೇ ದಿನ ಪೋಕ್ಸೋ ಕಾಯ್ದೆ, ಪೋಲಿಸ್ ಇಲಾಖೆ ಮತ್ತು ಇತರೆ ಇಲಾಖೆಗಳ ಸಮನ್ವಯದ ಕುರಿತು ತಜ್ಞರು ತರಬೇತಿ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಹರೀಶ್ ಸಿಂಗಟಗೆರೆ, ಉಪ ಕಾನೂನು ಅಭಿರಕ್ಷಕರಾದ ಡಿ.ನಟರಾಜ್, ಎನ್.ಎಚ್.ಯೋಗೇಶ್ ಇದ್ದರು.