ಮುಂಡರಗಿ: ಪ್ರತಿ ಮನುಷ್ಯ ಪರಿಸರದ ರಕ್ಷಕನಾಗಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆಯನ್ನು ಅದು ರಕ್ಷಣೆ ಮಾಡುತ್ತದೆ. ಪರಿಸರ ಸಂರಕ್ಷಣೆ ಅದು ಕೇವಲ ಮಾತಾಗಬಾರದು. ಅದು ಕೃತಿಯಲ್ಲಿ ಬರಬೇಕು. ಕಪ್ಪತಗುಡ್ಡದಲ್ಲಿ ನೂರಾರು ವನಸ್ಪತಿ ಸಸ್ಯಗಳು ದೊರೆಯುತ್ತವೆ. ಕಪ್ಪತಗುಡ್ಡದ ಶ್ರೇಷ್ಠತೆ ಅರಿಯಬೇಕು ಎಂದು ಡಾ. ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ಶಿಂಗಟರಾಯನಕೇರಿ ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮಣ್ಣ ಮೇಗಲಮನಿ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಉಳಿವಿಗಾಗಿ ವಿಶೇಷ ಕಾಳಜಿ ವಹಿಸಬೇಕು. ಪರಿಸರ ನಾಶ ಮಾಡುವವರಿಗೆ ತಿಳಿವಳಿಕೆ ನೀಡಬೇಕು. ಪರಿಸರ ಸಂರಕ್ಷಣೆಯ ಕೆಲಸ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ತಾಲೂಕು ಕಸಾಪನಿಂದ ಹಲವಾರು ಕಾರ್ಯಕ್ರಮ ಆಯೋಜಿಸಲಾಗಿದೆ. ಅದಕ್ಕೆ ಪ್ರತಿಯೊಬ್ಬರ ಸಹಕಾರ ದೊಡ್ಡದಿದೆ. ಇನ್ನೂ ಅನೇಕ ಸಾಹಿತ್ಯಪರ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದರು.ಈ ವೇಳೆ ಪರಿಸರ ಪ್ರೇಮಿಗಳಾದ ವಿ.ಎಫ್. ಅಂಗಡಿ, ಡಾ. ಪಿ.ಬಿ. ಹಿರೇಗೌಡರ, ಮಲ್ಲನಗೌಡ ಗೌಡರ ಹಾಗೂ ಶಿವಪ್ರಕಾಶ ನಾಗರಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಆರ್‌ಎಫ್‌ಒ ಮಂಜುನಾಥ ಮೇಗಲಮನಿ, ಡಾ. ಹಿರೇಗೌಡರ ಮಾತನಾಡಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಆರ್.ಎಲ್. ಪೊಲೀಸಪಾಟೀಲ, ಎಸ್.ಬಿ.ಕೆ. ಗೌಡರ, ಶಂಕರ ಕುಕನೂರ, ಮಂಜುನಾಥ ಮುಧೋಳ ಸೇರಿದಂತೆ ತಾಲೂಕು ಕಸಾಪ ಪದಾಧಿಕಾರಿಗಳು, ಕವಿಗಳು, ಸಾಹಿತ್ಯಾಭಿಮಾನಿಗಳು ಇದ್ದರು. ವೀಣಾ ಪಾಟೀಲ ಸ್ವಾಗತಿಸಿದರು. ಮಂಜುಳಾ ಇಟಗಿ ನಿರೂಪಿಸಿದರು.