ಕುರುಗೋಡು: ಬಹುತ್ವದಲ್ಲಿ ಏಕತೆ ಸಾಧಿಸಿರುವ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟಿದ್ದಾರೆ ಎಂದು ನರಸಪ್ಪ ತಹಶೀಲ್ದಾರ್ ಹೇಳಿದರು. ತಾಲೂಕು ಆಡಳಿತ, ಸಮಾಜಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.
ಸಿಪಿಐ ವಿಶ್ವನಾಥ ಕೆ. ಹಿರೇಗೌಡರ್ ಮಾತನಾಡಿ, ಈ ದಿನವನ್ನು ೧೯೧೫ಕ್ಕೂ ಮೊದಲು ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು. ನಂತರ ವಿಶ್ವ ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ. ೨ ವರ್ಷಕ್ಕೂ ಅಧಿಕ ದಿನಗಳ ಪರಿಶ್ರಮದಿಂದ ಎಲ್ಲ ದೇಶಗಳ ಕಾನೂನುಗಳನ್ನು ಪರಿಶೋಧಿಸಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಎಲ್ಲರೂ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಿ, ಕಾನೂನುಗಳನ್ನು ಆರಾಧಿಸಿ, ಪೂಜಿಸಿ ಸಂವಿಧಾನಕ್ಕೆ ಗೌರವಕೊಡಬೇಕು ಎಂದು ಸಲಹೆ ನೀಡಿದರು.ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಿತು. ಬಾಲಕಿಯರ ಪ್ರೌಢಶಾಲೆಯಿಂದ ಪ್ರಾರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಕಚೇರಿ ಆವರಣದಲ್ಲಿ ಸಮಾವೇಶಗೊಂಡಿತು.
ತಾಲೂಕು ಕಚೇರಿ, ಸಮಾಜಕಲ್ಯಾಣ ಇಲಾಖೆ, ಪುರಸಭೆ ಸಿಬ್ಬಂದಿ ಮತ್ತು ವಿವಿಧ ಶಾಲೆ ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕವಾಗಿ ಪೀಠಿಕೆ ಓದುವ ಮೂಲಕ ಸಂವಿಧಾನಕ್ಕೆ ಗೌರವ ಸಮರ್ಪಿಸಿದರು.ಈ ವೇಳೆ ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಂಬೇಡ್ಕರ್ ಸಂಘದ ಅಧ್ಯಕ್ಷ ಟಿ. ಸಿದ್ದಪ್ಪ, ಗ್ರೇಡ್-೨ ತಹಸೀಲ್ದಾರ್ ಮಲ್ಲೇಶಪ್ಪ, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೆಯ ಹೆಗಡೆ, ಪ್ರಾಚಾರ್ಯ ವೇಣುಗೋಪಾಲ್, ಉಪನೋಂದಣಾಧಿಕಾರಿ ಸಂತೋಷ್ ಪಾಟೀಲ್, ಪ್ರಾಚಾರ್ಯ ಶಾಂತಲಾ, ಸಮಾಜ ಕಲ್ಯಾಣ ಇಲಾಖೆಯ ಕಾಳಮ್ಮ, ಪ್ರಾಧ್ಯಾಪಕ ಮಧುಸೂಧನ್, ಶಿರಸ್ತೇದಾರ್ ರಾಜಶೇಖರ, ವಿಜಯಕುಮಾರ್, ಕಂದಾಯ ನಿರೀಕ್ಷಕ ಸುರೇಶ್ ಮತ್ತು ಭದ್ರಯ್ಯ, ನಾಗರಾಜ್ ಮುಸುತಿ, ಕೆ. ಬಸವರಾಜ್ ಇದ್ದರು.
ಕುರುಗೋಡು ಪಟ್ಟಣದಲ್ಲಿ ಬುಧವಾರ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ನರಸಪ್ಪ ತಹಸೀಲ್ದಾರ್ ಮಾತನಾಡಿದರು.