ಕನ್ನಡಪ್ರಭ ವಾರ್ತೆ ಉಡುಪಿ
ಈಶ್ವರಪ್ಪ ಅವರನ್ನು ಅಮಿತ್ ಶಾ ದೆಹಲಿಗೆ ಕರೆದಿದ್ದಾರೆ, ಅವರ ಮಾತುಕತೆ ಯಶಸ್ವಿಯಾಗಲಿ. ಈಶ್ವರಪ್ಪ ಬಿಜೆಪಿಯಲ್ಲಿಯೇ ಉಳಿಯುವಂತಾಗಲಿ, ರಾಜ್ಯದಲ್ಲಿ ವಂಶಪಾರಂಪರ್ಯದ ರಾಜಕೀಯ ಅಂತ್ಯವಾಗಲಿ ಎಂದು ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಪ್ರಧಾನಿ ಮೋದಿ ಅವರೇ ಈ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಬೇರೆ ಪಕ್ಷದೊಂದಿಗೆ ಅಡ್ಜಸ್ಟ್‌ಮೆಂಟುಗಳನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಕೂಡ ಕುಟುಂಬ ರಾಜಕಾರಣ ನಿಲ್ಲಬೇಕು ಎಂದು ಬಯಸುತ್ತಿದ್ದಾರೆ. ಅದನ್ನು ಶೀಘ್ರದಲ್ಲಿಯೇ ಮೋದಿ ಈಡೇರಿಸುತ್ತಾರೆ. ದೇಶದಲ್ಲಿಯೇ ಅಂತಹ ವ್ಯವಸ್ಥೆಯನ್ನು ಅಂತ್ಯಗೊಳಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಮೋದಿ ಅವರ ಮಾರ್ಗದರ್ಶನದಲ್ಲಿ ಈಶ್ವರಪ್ಪ ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.
ರಾಜ್ಯಾಧ್ಯಕ್ಷರ ಬದಲಾವಣೆ ಈಶ್ವರಪ್ಪ ಅವರ ಬೇಡಿಕೆ, ಯಾರನ್ನು ಇಳಿಸಬೇಕು, ಯಾರನ್ನ ಏರಿಸಬೇಕು, ಯಾರನ್ನು ಮೂಲೆಗೊತ್ತಬೇಕು ಎಂದು ಪಕ್ಷ ತೀರ್ಮಾನ ಮಾಡುತ್ತದೆ ಎಂದರು.ಅಪ್ಪ ಮಕ್ಕಳ ವಿರುದ್ಧದ ನಮ್ಮ ಸಮರಕ್ಕೆ ಲೋಕಸಭಾ ಚುನಾವಣೆ ಮುಗಿಯುವವರೆಗೆ ಬೇರೆ ಕೆಲವು ಮಂದಿಗೆ ಚಾರ್ಜ್ ನೀಡಿದ್ದೇವೆ. ಅವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಈಗ ನನ್ನ ಅವಶ್ಯಕತೆ ಇಲ್ಲ ಎಂದವರು ಮಾರ್ಮಿಕವಾಗಿ ನುಡಿದರು.
* ಸಿದ್ರಾಮಯ್ಯ ಹತಾಶರಾಗಿದ್ದಾರೆಹಿಂದೂ ಸಮಾಜ, ಜಾತಿಗಳ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆಯೇ ಇಲ್ಲ. ಹಿಂದುತ್ವ ಹಿಂದೂ ವಿಚಾರಧಾರೆಗೆ ವಿರೋಧ ಇರುವವರು ಅವರು. ಈಗ ಯಾಕೆ ಮೈಸೂರಿನಲ್ಲಿ ತಮ್ಮ ಅಭ್ಯರ್ಥಿಯೇ ನಿಜವಾದ ಒಕ್ಕಲಿಗ ಅಂತಿದ್ದಾರೆ ಎಂದು ಯತ್ನಾಳ್ ಪ್ರಶ್ನಿಸಿದರು.
60 ಸಾವಿರ ಮತಗಳ ಲೀಡ್ ಕೊಡದೇ ಇದ್ರೆ, ನನ್ನ ಮರ್ಯಾದೆ ಪ್ರಶ್ನೆ, ನನ್ನ ಕುರ್ಚಿ ಹೋಗ್ತದೆ ಅಂತಿದ್ದಾರೆ. ಲೋಕಸಭಾ ಚುನಾವಣೆ ನಂತರ ತನ್ನ ಕುರ್ಚಿ ಹೋಗ್ತದೆ, ಪತನ ಖಚಿತ ಅಂತ ಅವರಿಗೆ ಗೊತ್ತಾಗಿಹೋಗಿದೆ. ಅದಕ್ಕೆ ಹತಾಶರಾಗಿ ಈ ರೀತಿ ಚಾಮರಾಜನಗರ, ಮೈಸೂರಿನಲ್ಲಿ ಭಾಷಣ ಮಾಡಿದ್ದಾರೆ. ಆ ಕ್ಷೇತ್ರಗಳಲ್ಲಿ ಸೋತರೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುತ್ತಾರೆ. ಅದಕ್ಕೆ ಜನರಿಂದ ಅನುಕಂಪದ ಆಧಾರದಲ್ಲಿ ಮತ ಗಳಿಸುವ ಪ್ರಯತ್ನ ಮಾಡುತಿದ್ದಾರೆ ಎಂದು ಯತ್ನಾಳ್ ಹೇಳಿದರು.* ಚುನಾವಣೆ ನಂತರ ಸರ್ಕಾರ ಇರಲ್ಲ
ಕಾಂಗ್ರೆಸ್ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿಲ್ಲ, ಮಂತ್ರಿ ಮಕ್ಕಳಿಗೆ, ತಮ್ಮನಿಗೆ, ಅಳಿಯನಿಗೆ, ಮಗಳಿಗೆ ಟಿಕೆಟ್ ಕೊಟ್ಟಿದ್ದಾರೆ, ಒಬ್ಬ ಕೋಟ ಶ್ರೀನಿವಾಸ ಪೂಜಾರಿಯಂತಹ ಕಾರ್ಯಕರ್ತನಿಗೆ ನೀಡಿಲ್ಲ. ಒಬ್ಬ ಮಂತ್ರಿಯೂ ಸ್ಪರ್ಧಿಸುವ ದೈರ್ಯ ಮಾಡಿಲ್ಲ, ತಮ್ಮ ಹುದ್ದೆ ತ್ಯಾಗ ಮಾಡಿ, ರಾಹುಲ್ ಗಾಂಧಿಯೋ ಸೋನಿಯಾ ಗಾಂಧಿಯೋ ಪ್ರಧಾನಿಯಾಗಲಿ ಅಂತ ಪ್ರಯತ್ನ ಮಾಡಿಲ್ಲ. ಕಾಂಗ್ರೆಸ್ ಮಂತ್ರಿಗಳು ಬೇಕಾದಷ್ಟು ಹಣ ಮಾಡಿದ್ದಾರೆ, ಆ ಹಣದಲ್ಲಿ ತಮ್ಮ ಮಕ್ಕಳನ್ನು ಅಳಿಯನನ್ನು ಗೆಲ್ಲಿಸಬಹುದು ಎಂದು ತಿಳಿದುಕೊಂಡಿದ್ದಾರೆ ಎಂದು ಯತ್ನಾಳ್ ಹೇಳಿದರು.ತಮ್ಮ ಮಕ್ಕಳ ಸಂಬಂಧಿಗಳು ಸೋತರೆ ಮಂತ್ರಿಗಳ ತಲೆದಂಡ ಎಂದು ಕಾಂಗ್ರೆಸ್ ಹೇಳಿದೆ. ಹಾಗಾಗುವುದಿಲ್ಲ, ಚುನಾವಣೆ ನಂತರ ಸರ್ಕಾರವೇ ಉಳಿಯುವುದಿಲ್ಲ ಎಂದು ಯತ್ನಾಳ್ ಭವಿಷ್ಯ ನುಡಿದರು.
* ಬಿಜೆಪಿಗೆ 25 ಸೀಟು ಗ್ಯಾರಂಟಿಬಿಜೆಪಿ ಕನಿಷ್ಟ 25 ಸೀಟು ಬಿಜೆಪಿ ಗೆಲ್ಲುತ್ತದೆ. ದೇಶದ ಭವಿಷ್ಯದ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಮಾತ್ರವಲ್ಲ, ಜನಸಾಮಾನ್ಯರಲ್ಲೂ ಅಭಿವೃದ್ಧಿ, ದೇಶದ ಭದ್ರತೆಯ ಚಿಂತನೆ ಬಂದಿದೆ, ಅದಕ್ಕಾಗಿ ಮೋದಿಗೆ ಮತ ಹಾಕುತ್ತಾರೆ. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಆಡಳಿತದಲ್ಲಿರುವಾಗಲೂ ನಾವು 25 ಸೀಟು ಗೆದ್ದಿದ್ದೆವಲ್ಲ, ಅದೇ ಮಾದರಿ ಈ ಬಾರಿಯಾಗುತ್ತದೆ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
* ಮಂಜುನಾಥ್ ಸೋತ್ರೆ ದುರಂತಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಗೆದ್ರೆ ಅದು ದೇಶದ ದುರ್ದೈವ ಎಂದ ಯತ್ನಾಳ್, ಬಿಜೆಪಿಯ ಅಭ್ಯರ್ಥಿ ಡಾ.ಮಂಜುನಾಥ ಶ್ರೇಷ್ಠ ವೈದ್ಯರಷ್ಟೆ ಅಲ್ಲ, ಮನುಷ್ಯತ್ವ ಇರುವಂತಹ ವ್ಯಕ್ತಿ. ಅಂಥವರನ್ನು ಸೋಲಿಸಿದರೆ ಅದು ಕರ್ನಾಟಕದ ದುರಂತ. ಅಂತಹವರು ಯಾವ ಕಾಲಕ್ಕೂ ಸೋಲಬಾರದು, ಆ ಮೂಲಕ ಭ್ರಷ್ಟರು, ಗೂಂಡಾಗಳ ರಾಜಕಾರಣದ ಕೊನೆಯಾಗಬೇಕು ಎಂದು ಹೇಳಿದರು.
ಸುಮಲತಾಗೆ ಸೂಕ್ತ ಸ್ಥಾನಮಾನ ನೀಡಬೇಕು: ಯತ್ನಾಳ್ಸಂಸದೆ ಸುಮಲತಾ ಅವರು ದೇಶದ ದೃಷ್ಟಿಯಿಂದ ಎಲ್ಲರಿಗೆ ಒಪ್ಪಿಗೆ ಆಗುವ ನಿರ್ಣಯ ತೆಗೆದುಕೊಂಡಿದ್ದಾರೆ. ಇದರಿಂದ ಸುಮಲತಾ ಅವರ ಮೇಲಿನ ಗೌರವ ಇಮ್ಮಡಿಯಾಗಿದೆ ಎಂದು ಯತ್ನಾಳ್ ಹೇಳಿದರು.ಸುಮಲತಾ ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ಕೊಡಬೇಕು ನಾನು ಒತ್ತಾಯ ಮಾಡುತ್ತೇನೆ. ಚುನಾವಣಾ ಆಗೋವರೆಗೆ ಉಪಯೋಗ ಮಾಡಿಕೊಂಡು ಬಿಟ್ಟುಬಿಟ್ಟರೆ ನಮ್ಮ ಪಕ್ಷಕ್ಕೆ ಗೌರವ ಉಳಿಯೋದಿಲ್ಲ ಎಂದು ಎಚ್ಚರಿಕೆ ನೀಡಿದ ಯತ್ನಾಳ್, ಮಂಡ್ಯದಲ್ಲೀಗ ಎಚ್.ಡಿ. ಕುಮಾರಸ್ವಾಮಿ ಗೆಲುವು ನಿಶ್ಚಿತವಾಗಿದೆ ಎಂದರು.
* ಸೋತ ಮೇಲೆ ಪಶ್ಚಾತ್ತಾಪರಾಜಕಾರಣದಲ್ಲಿ ಶಾಶ್ವತ ಮಿತ್ರ ಶತ್ರು ಎಂಬುವುದು ಇಲ್ಲ, ಸಿದ್ಧಾಂತಗಳ ಮೇಲೆ ಪ್ರಜಾತಂತ್ರ ವ್ಯವಸ್ಥೆ ಇದೆ. ಮಂಡ್ಯ ಚುನಾವಣೆಯಲ್ಲಿ ಮಾತು ವೈಯಕ್ತಿಕ ಹಂತಕ್ಕೆ ಹೋಗಿತ್ತು, ರಾಜಕೀಯ ಅಶ್ಲೀಲ ಮತ್ತು ಹಗುರದ ಹಂತಕ್ಕೆ ಹೋಗಬಾರದು. ಸುಮಲತಾ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಬಾರದಿತ್ತು, ಚಾರಿತ್ರ್ಯ ವಧೆ ಮಾಡುವ ರಾಜಕಾರಣ ಯಾರಿಗೂ ಶೋಭೆ ತರಲ್ಲ, ಹಿಂದೆ ಆಡಿದ್ದಕ್ಕೆ ಕುಮಾರಸ್ವಾಮಿ ಪ್ರಾಯಶ್ಚಿತಪಟ್ಟಿದ್ದಾರೆ. ಆದರೆ ಕಾಂಗ್ರೆಸಿನ ಒಬ್ಬ ನಾಯಕ ಪ್ರಾಯಶ್ಚಿತಪಟ್ಟಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಆತ ಸೋತ ಮೇಲೆ ಪ್ರಾಯಶ್ಚಿತ್ತ ಪಡುತ್ತಾನೆ ಎಂದು ಯತ್ನಾಳ್, ಡಿ.ಕೆ. ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.