ಗದಗ: ರೈತರು ರಿಟೇಲ್ ದರದಲ್ಲಿ ಕೃಷಿಗೆ ಬೇಕಾದ ಸಾಮಾಗ್ರಿಗಳನ್ನು ತಂದು ಹೋಲ್‌ಸೇಲ್ ದರದಲ್ಲಿ ಮಾರುವುದು ವಿಪರ್ಯಾಸ. ಹೀಗಾಗಿ ರೈತರು ಬೆಳೆದ ಬೆಳೆಗಳಿಗೆ ಕೃಷಿಕರೇ ಬೆಲೆ ನಿಗದಿಪಡಿಸುವಂತಾಗಬೇಕು ಎಂದು ಎಸ್‌ಬಿಐ- ಎಎಸ್‌ಎಫ್, ಆರ್‌ಸೆಟಿ ನಿರ್ದೇಶಕ ಶಿವಕುಮಾರ ಎಸ್. ತಿಳಿಸಿದರು.
ಕೆವಿಕೆ ವಿಶ್ರಾಂತ ವಿಜ್ಞಾನಿ ಎಸ್.ಕೆ. ಮುದ್ಲಾಪೂರ ಮಾತನಾಡಿ, ರೈತರು ಕೃಷಿಯಲ್ಲಿ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಯಶಸ್ವಿ ರೈತರಾಗಬೇಕು ಎಂದರು.
ಕೃಷಿ ಪಂಡಿತ ಪ್ರಶಸ್ತಿ ವಿಜೇತೆ ಸುಧಾ ಬೇವಿನಮರದ ಮಾತನಾಡಿ, ಜಿಲ್ಲೆಗೆ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಒಂದು ವರದಾನವಾಗಿದೆ. ಇದು ರೈತರ ಏಳ್ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತ್ತಲಿದೆ. ಇದರ ಸದುಪಯೋಗ ಪಡೆದುಕೊಂಡ ಫಲವಾಗಿ ಕೃಷಿಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಹೀಗಾಗಿ ಇದರ ಸದುಪಯೋಗವನ್ನು ರೈತರೆಲ್ಲರೂ ಪಡೆದುಕೊಂಡು ಆರ್ಥಿಕ ಪ್ರಗತಿಯನ್ನು ಹೊಂದಬೇಕು ಎಂದರು.ಸಾವಯವ ಕೃಷಿಕ ವಿದ್ಯಾಧರ ರಮಣಿ ಮಾತನಾಡಿ, ರೈತರು ಸಾವಯವ ಕೃಷಿ ಅಳವಡಿಸಿಕೊಳ್ಳಲು ಜಿಲ್ಲೆಯಲ್ಲಿ ಕೆವಿಕೆಯ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ. ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬೇಕೆಂದರು.
ಕೆವಿಕೆ ಮುಖ್ಯಸ್ಥೆ ಡಾ. ಸುಧಾ ಮಂಕಣಿ ಮಾತನಾಡಿ, ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ, ಸಾವಯವ ಹಾಗೂ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು, ಹಾಳಾಗುತ್ತಿರುವ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಬೇಕು. ಉತ್ತಮ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಈ ವೇಳೆ ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಎನ್.ಎಚ್. ಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ನಾಯಕ, ರೈತರಾದ ಶಂಕರಗೌಡ ಪಾಟೀಲ, ಶೇಕರಪ್ಪ ಲಮಾಣಿ ಸೇರಿದಂತೆ ರೈತರು ಇದ್ದರು. ಡಾ. ಮಂಜುಪ್ರಕಾಶ ಪಾಟೀಲ ನಿರೂಪಿಸಿದರು. ಡಾ. ವಿನಾಯಕ ನಿರಂಜನ ಸ್ವಾಗತಿಸಿದರು. ಡಾ. ಚೇತನಬಾಬು ಆರ್.ಟಿ. ವಂದಿಸಿದರು.