ಹಿರಿಯೂರು: ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಗಳು ನೀಡಿರುವ ಸೂಚನೆಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಹಬ್ಬಗಳು ಧಾರ್ಮಿಕ ಆಚರಣೆಯ ಹಿರಿಮೆಯನ್ನು ಎತ್ತಿ ಹಿಡಿಯುವಂತಿರಬೇಕು ಎಂದು ಅಬ್ಬಿನಹೊಳೆ ಠಾಣೆ ಪಿಎಸ್‌ಐ ದೇವರಾಜ್ ಹೇಳಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಮಂಟಪಗಳನ್ನು ನಿರ್ಮಿಸಿಕೊಳ್ಳಬೇಕು. ಧಾರ್ಮಿಕ ಸ್ಥಳಗಳ ಬಳಿ, ಮಹಿಳೆಯರು ಮಕ್ಕಳು ಇರುವ ಕಡೆ ಪಟಾಕಿ ಹಚ್ಚುವಂತಹ ಕೆಲಸ ಮಾಡಬಾರದು. ಯಾವುದೇ ರೀತಿಯ ಕೋಮು ಪ್ರಚೋದನೆ ಉಂಟಾಗುವ ರೀತಿ ವರ್ತಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು ಸಂಘಟಕರು ಎಲ್ಲಾ ರೀತಿಯ ಮುಂಜಾಗರೂಕತೆ ವಹಿಸಬೇಕು ಎಂದು ಸೂಚಿಸಿದರು.
ಹಬ್ಬಗಳು ಸೌಹಾರ್ದ ಮತ್ತು ಸಂಬಂಧಗಳನ್ನು ವೃದ್ಧಿಸುವಂತಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಮತ್ತು ನಂಬುವುದನ್ನು ಮಾಡಬಾರದು. ಧ್ವನಿವರ್ಧಕವನ್ನು ರಾತ್ರಿ ಹತ್ತರಿಂದ ಬೆಳಿಗ್ಗೆ 6 ರವರೆಗೆ ಬಳಸುವುದನ್ನು ನಿಷೇಧಿಸಲಾಗಿದೆ. ಒಟ್ಟಿನಲ್ಲಿ ಎಲ್ಲರೂ ಶಾಂತಿಯಿಂದ, ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ಪೊಲೀಸ್ ಇಲಾಖೆಯ ಕಣ್ಗಾವಲು ಸದಾ ಎಲ್ಲಾ ಕಡೆಯೂ ಇರುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೂವಿನಹೊಳೆ ರಂಗಸ್ವಾಮಿ, ಹೇಮಂತ್ ಗೌಡ, ಈಶ್ವರಗೆರೆ ಮಂಜುನಾಥ್, ದೇವರಕೊಟ್ಟ ರಂಗಸ್ವಾಮಿ, ಅಬ್ಬಿನಹೊಳೆ ಮರಡಪ್ಪ, ಖoಡೇನಹಳ್ಳಿ ವೆಂಕಟೇಶ್, ಈಶ್ವರಪ್ಪ, ಜಿಯಾವುಲ್ಲ,ಇಕ್ಕನೂರು ತಮ್ಮಣ್ಣ, ಟಿ.ಗೊಲ್ಲಹಳ್ಳಿ ಪರಮೇಶ್, ಚಿಲ್ಲಹಳ್ಳಿ ಚಿದಾನಂದ್, ಪಿಎಸ್ಐ ಹುಸೇನ್, ಸಿಬ್ಬಂದಿಗಳಾದ ಎಎಸ್ಐ ತಿಪ್ಪೇಸ್ವಾಮಿ, ಯಳನಾಡ್ ನಾಗರಾಜು, ಬಬ್ಬೂರು ನಾಗರಾಜ್, ರುದ್ರೇಶ್, ಶ್ರೀನಿವಾಸ್ ಮುಂತಾದವರು ಹಾಜರಿದ್ದರು.