ಗದಗ: ಪ್ರಸಕ್ತ ವರ್ಷ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಇಲಾಖೆ, ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಸರಿಯಾಗಿ ಸರ್ಕಾರದ ಮಾರ್ಗಸೂಚಿಗಳ ಪಾಲನೆಗೆ ಸೂಚನೆ ನೀಡಿದರು.ಪಿಓಪಿನಿಂದ ತಯಾರಾಗುವ ಮೂರ್ತಿಗಳ ಮಾರಾಟ ಮತ್ತು ಬಳಕೆಗೆ ಈ ಬಾರಿ ಕಟ್ಟುನಿಟ್ಟಾಗಿ ನಿರ್ಬಂಧ ಹೇರಲಾಗಿದೆ. ಪಿಓಪಿ ಮೂರ್ತಿಗಳು ನದಿಗಳಲ್ಲಿ ವಿಸರ್ಜನೆಗೊಂಡಾಗ ಜಲಮಾಲಿನ್ಯ ಉಂಟುಮಾಡುವ ಸಾಧ್ಯತೆ ಇರುವುದರಿಂದ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದರು.ಗಣೇಶ ಮೂರ್ತಿಗಳು ನದಿ ತಟಗಳಲ್ಲಿ ವಿಸರ್ಜನೆಗೊಂಡಾಗ ಜಲಚರ ಜೀವಿಗೆ ಅಪಾಯ ಮತ್ತು ನೀರಿನ ಮಾಲಿನ್ಯ ಉಂಟಾಗುತ್ತದೆ ಎಂಬುದರಿಂದ, ಈ ಬಾರಿ ಗದಗ ಜಿಲ್ಲೆಯಲ್ಲಿ ಪಿಓಪಿ ಮೂರ್ತಿಗಳ ಮಾರಾಟ, ತಯಾರಿ ಹಾಗೂ ಉಪಯೋಗವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ವ್ಯಾಪಾರಸ್ಥರಿಗೆ ಸ್ಥಳೀಯ ಸಂಸ್ಥೆಗಳಿಂದ ನೋಟಿಸ್ ನೀಡಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪರಿಸರ ಸ್ನೇಹಿ ಮೂರ್ತಿಗಳ ಪ್ರೋತ್ಸಾಹವಿರಲಿ, ಕಲಾವಿದರಿಗೆ ಮಣ್ಣು ಅಥವಾ ಪ್ರಕೃತಿಯ ಮತ್ತಿತರ ಪರಿಸರ ಸ್ನೇಹಿ ವಸ್ತುಗಳಿಂದ ಮೂರ್ತಿಗಳ ತಯಾರಿಕೆಗೆ ಸಹಕಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಹಸಿರು ಪಟಾಕಿ ಬಳಸೋಣ. ಪಟಾಕಿಗಳ ನಿಯಂತ್ರಿತ ಬಳಕೆ, ವಿಶೇಷವಾಗಿ ಹಸಿರು ಪಟಾಕಿಗಳ ಉಪಯೋಗವನ್ನು ಪ್ರೋತ್ಸಾಹಿಸಬೇಕು. ಶಬ್ದ ಮತ್ತು ವಾಯು ಮಾಲಿನ್ಯ ತಡೆಯಲು ಈ ಕ್ರಮ ಅವಶ್ಯಕವೆಂದು ತಿಳಿಸಿದರು.
ವಿಸರ್ಜನೆಗೆ ವ್ಯವಸ್ಥಿತ ಕ್ರಮ: ಜಿಲ್ಲೆಯ ಪ್ರತಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ತಾತ್ಕಾಲಿಕ ವಿಸರ್ಜನಾ ಕುಣಿಗಳು ನಿರ್ಮಿಸಲು ಹಾಗೂ ಹಳ್ಳ-ಕಾಲುವೆಗಳಲ್ಲಿ ವಿಸರ್ಜನೆ ಮಾಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮೂರ್ತಿಗಳನ್ನು ನಿಗದಿ ಪಡಿಸಿದ ಸ್ಥಳಗಳಲ್ಲಿ ವಿಸರ್ಜಿಸಲು ಸಾರ್ವಜನಿಕರಿಗೆ ಪ್ರೋತ್ಸಾಹ ನೀಡಲು ಮನವಿ ಮಾಡಿದರು.ಪರಿಸರ ರಕ್ಷಣೆ ನಮ್ಮ ಹೊಣೆಗಾರಿಕೆ. ಈ ಬಾರಿಯ ಗಣೇಶೋತ್ಸವ ಪರಿಸರ ಸ್ನೇಹಿಯಾಗಿ ಆಚರಿಸಿದರೆ, ಅದು ಮುಂದಿನ ಪೀಳಿಗೆಗೆ ಉತ್ತಮ ಸಂದೇಶವಾಗಲಿದೆ ಎಂದು ಹೇಳಿದರು.
ಸಾರ್ವಜನಿಕ ಗಣೇಶೋತ್ಸವ ಆಯೋಜಕರು ಪರವಾನಿಗೆಗಾಗಿ ಪದೇ ಪದೇ ಅಲೆದಾಟ ತಪ್ಪಿಸಲು ಏಕಗವಾಕ್ಷಿ ಅನುಮತಿ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಪೊಲೀಸರು, ನಗರಸಭೆ, ವಿದ್ಯುತ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಈ ಕೇಂದ್ರದೊಂದಿಗೆ ಒಗ್ಗೂಡಲ್ಪಟ್ಟಿದ್ದು, ಎಲ್ಲಾ ಅನುಮತಿಗಳು ಒಂದೇ ಅರ್ಜಿಯ ಮೂಲಕ ನೀಡಲಾಗುತ್ತವೆ. ಈ ಕುರಿತು ತುರ್ತಾಗಿ ಅಧಿಕಾರಿಗಳು ಏಕ ಗವಾಕ್ಷಿ ಕೇಂದ್ರ ತೆರೆದು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.ಧ್ವನಿವರ್ಧಕಗಳ ನಿಯಂತ್ರಣ: ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಸ್ಪಷ್ಟಪಡಿಸಿದಂತೆ, ಧ್ವನಿವರ್ಧಕಗಳ ಬಳಕೆಗೆ ನಿಗದಿತ ಸಮಯದ ಮಿತಿಯನ್ನು ಅನುಸರಿಸಬೇಕಾಗುತ್ತದೆ. ರಾತ್ರಿ 10 ಗಂಟೆಯ ನಂತರ ಯಾವುದೇ ರೀತಿಯ ಸೌಂಡ್ ಸಿಸ್ಟಂ ಅಥವಾ ಲೌಡ್ ಸ್ಪೀಕರ್ ಬಳಸಕೂಡದು. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿಯ ನಿಯಂತ್ರಣ ಮಟ್ಟ ಮೀರಿ ಶಬ್ದ ಮಾಡುವ ಧ್ವನಿವರ್ಧಕ ನಿಷೇಧ ಮಾಡಲಾಗುವುದು ಎಂದರು.
ಈ ವೇಳೆ ಜಿಪಂ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಡಿವೈಎಸ್‌ಪಿ ಸಜ್ಜನರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ವಾರ್ತಾಧಿಕಾರಿ ವಸಂತ ಮಡ್ಲೂರ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ್ ಸೇರಿದಂತೆ ಜಿಲ್ಲಾ ಪರಿಸರ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಗಣೇಶ ಮೂರ್ತಿ ತಯಾರಕರು, ವಿತರಕರು ಇದ್ದರು.ಪರಿಸರ ಉಳಿಸುವುದು ನಮ್ಮೇಲ್ಲರ ಹೊಣೆಗಾರಿಕೆ. ದೇವರ ಆರಾಧನೆ ಜೊತೆಗೆ ಪ್ರಕೃತಿಯ ಕಾಪಾಡುವುದು ಇಂದಿನ ಕಾಲದ ಅವಶ್ಯಕತೆ. ಎಲ್ಲರ ಸಹಕಾರದಿಂದ ಪರಿಸರ ಸ್ನೇಹಿ ಹಬ್ಬಕ್ಕೆ ನಾವು ಉದಾಹರಣೆಯಾಗಿ ನಿಲ್ಲೋಣ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.