ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸ್ವಾತಂತ್ರ್ಯ ಪೂರ್ವದಲ್ಲಿ ಸಂಘಟನೆಗೆ ಮಾಡಲಾಗಿದ್ದ ಸಂಪ್ರದಾಯ ಪೂಜೆ ಗಣೇಶ ಹಬ್ಬ ಪ್ರತಿಷ್ಠಾಪನೆಯು ಮೋಜು-ಮಸ್ತಿಗೆ ಸೀಮಿತವಾಗಿರಬಾರದು. ಸಾಮರಸ್ಯ ಮೂಡಿಸುವ ಹಬ್ಬ ಆಗಬೇಕು ಎಂದು ಇನ್ಸ್‌ಪೆಕ್ಟರ್ ಆನಂದ್ ಮೂರ್ತಿ ಅಭಿಮತ ವ್ಯಕ್ತಪಡಿಸಿದರು.ಹನೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬದ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಗ್ರಾಮಗಳ ಪಟ್ಟಣ ಸೇರಿದಂತೆ ಮುಖಂಡರುಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಏಕ ಗವಾಕ್ಷಿ ಸಮಿತಿ ರಚನೆ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಜೊತೆಗೆ ಗಣೇಶ ಪ್ರತಿಷ್ಠಾಪನೆಯನ್ನು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡದೆ ಸುಸಜ್ಜಿತವಾದ ಸ್ಥಳದಲ್ಲಿ ಗಣಪತಿ ಪ್ರತಿಷ್ಠಾಪಿಸಿ ವಿವಿಧ ಇಲಾಖೆಗಳ ಅನುಮತಿಯನ್ನು ಪಡೆದು ಸರ್ಕಾರದ ಸುತ್ತೋಲೆಯ ಪ್ರಕಾರ ನಿಯಮಾವಳಿಗಳನ್ನು ಅನುಸರಿಸುವ ಮೂಲಕ ಗಣಪತಿ ವಿಸರ್ಜನೆ ವೇಳೆಯಲ್ಲಿ ರಾತ್ರಿ 9ರ ಒಳಗೆ ವಿಸರ್ಜನೆ ಮಾಡಬೇಕು. ಶಾಂತಿ ಸೌದಾರ್ಹತೆಯಿಂದ ಹಬ್ಬವನ್ನು ಆಚರಿಸಬೇ.ಕು ಡಿಜೆ ಕಾರ್ಯಕ್ರಮವನ್ನು ಸರ್ಕಾರ ನಿಷೇಧಿಸಿದೆ ಅಂತಹ ವಿಚಾರಗಳು ಕಂಡು ಬಂದರೆ ನಿರ್ದಾಕ್ಷಣೆಯಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಶೇಷಣ್ಣ ಮಾತನಾಡಿ, ತಾಲೂಕು ಆಡಳಿತ ಕಚೇರಿ ವತಿಯಿಂದ ಗಣೇಶ ಪ್ರತಿಷ್ಠಾಪನ ಮಾಡಲು ಅನುಮತಿಗಾಗಿ ಕಚೇರಿ ತೆರೆಯಲಾಗುವುದು ನಿರ್ದಿಷ್ಟ ನಿಯಮಾವಳಿಗಳ ಏಕಗವಕ್ಷಿ ಅನುಮತಿಯನ್ನು ಪಡೆದು ನಿಗದಿತ ಸ್ಥಳದಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು..
ಚೆಸ್ಕಾಂ ಸಹಾಯಕ ಎಂಜಿನಿಯರ್ ಆನಂದ್ ಮಾತನಾಡಿ, ಗಣಪತಿ ಪ್ರತಿಷ್ಠಾಪನ ಸ್ಥಳದಲ್ಲಿ ವಿದ್ಯುತ್ ದೀಪ ಅಲಂಕಾರ ಮತ್ತು ಮೈಕ್ ಸೆಟ್ ಗಳನ್ನೂ ಅಳವಡಿಸುವ ಮುನ್ನ ಉತ್ತಮ ವೈರ್ ಗಳನ್ನು ಬಳಸಿ ಮಳೆಗಾಲ ಆಗಿರುವುದರಿಂದ ಯಾವುದೇ ಲೋಪದೋಷಗಳು ಬರದಂತೆ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಪ್ರಕಾಶ್ ಮಾತನಾಡಿ, ಗಣೇಶ ಹಬ್ಬದ ಪ್ರಯುಕ್ತ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಸರ್ಕಾರದ ಸುತ್ತೋಲೆಯ ನಿಯಮವಳಿಗಳನ್ನು ಅನುಸರಿಸುವ ಮೂಲಕ ಸಾರ್ವಜನಿಕರು ಗಣಪತಿ ವಿಸರ್ಜನೆ ಮಾಡಬೇಕು. ಪಟ್ಟಣ ಪಂಚಾಯತಿಯಿಂದ ಬೇಕಾಗಿರುವ ಅನುಮತಿಯನ್ನು ಪಡೆಯಲು ಕಚೇರಿಯಲ್ಲಿ ಪಡೆಯುತಕ್ಕದ್ದು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಅಗ್ನಿಶಾಮಕ ದಳದ ಮಹೇಶ್ ಹಾಗೂ ವಿವಿಧ ಗ್ರಾಮಗಳ ಮುಖಂಡರು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.