ಹಿರಿಯೂರು: ಸದನದಲ್ಲಿ ಧರ್ಮಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಲು ಕ್ಷೇತ್ರದ ಸಚಿವರಿಗೆ ಇಚ್ಛಾ ಶಕ್ತಿಯ ಕೊರತೆಯಿದೆ. ಹಾಗಾಗಿ ಧರ್ಮಪುರ ತಾಲೂಕು ಕೇಂದ್ರ ಜಾರಿಯ ಬಗ್ಗೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ ಆರೋಪಿಸಿದರು.
ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಮಂಗಳವಾರ ಹೋಬಳಿಯ ಜನರ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.ಸದನದಲ್ಲಿ ಪಕ್ಕದ ತಾಲೂಕಿನ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಪರಶುರಾಮಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಸಭಾಪತಿಗಳಿಗೆ ಮನವಿ ಮಾಡಿದ್ದಾರೆ. ಆದರೆ ನಮ್ಮ ಹಿರಿಯೂರಿನ ಸಚಿವರು ಧರ್ಮಪುರದ ಬಗ್ಗೆ ಯಾವುದೇ ಮಾತನಾಡದೆ ಸುಮ್ಮನೆ ಕುಳಿತಿರುವುದು ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಧರ್ಮಪುರವನ್ನು ತಾಲೂಕು ಮಾಡುವ ಬಗ್ಗೆ ಸದನದಲ್ಲಿ ಧ್ವನಿ ಎತ್ತದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರವಾಗಿರುತ್ತದೆ ಎಂದು ಎಚ್ಚರಿಸಿದರು.
ಚುನಾವಣೆ ಸಂದರ್ಭದಲ್ಲಿ ಧರ್ಮಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಈ ಭಾಗದ ಜನರಿಗೆ ಭರವಸೆ ನೀಡಿ ಮತವನ್ನು ಹಾಕಿಸಿಕೊಂಡು ಗೆದ್ದಿರುವ ಸಚಿವರು ಈ ಭಾಗದ ಜನರ ಋಣವನ್ನು ತೀರಿಸಬೇಕು ಎಂದು ಹೇಳಿದರು.1974ರ ಕರ್ನಾಟಕ ಮರು ವಿಂಗಡಣಾ ಸಮಿತಿ, ಕೊಲ್ಕತ್ತಾ ಅಂಕಿ ಅಂಶ ಆಯೋಗ, ವಾಸುದೇವರಾವ್ ಸಮಿತಿ, ಗದ್ದಿಗೌಡರ್ ಸಮಿತಿಗಳು ಧರ್ಮಪುರವನ್ನು ತಾಲೂಕು ಮಾಡಬಹುದು ಎಂದು ಶಿಫಾರಸ್ಸು ಮಾಡಿವೆ. ಅಂದಿನಿಂದ ಇಂದಿನವರೆಗೂ ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸಚಿವರು ಕೂಡಲೇ ಧರ್ಮಪುರವನ್ನು ತಾಲೂಕು ಕೇಂದ್ರ ಮಾಡುವಂತೆ ಸದನದಲ್ಲಿ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಲ್ಲಪ್ಪ, ಶಿವಮೂರ್ತಿ, ನಾಗರಾಜರಾವ್, ರೈತ ಹೋರಾಟಗಾರ ತಿಪ್ಪೇಸ್ವಾಮಿ, ಬಿಜೆಪಿ ಯುವ ನಾಯಕರಾದ ಗಿರೇಶ್, ರವಿಶಂಕರ್, ರಂಗಸ್ವಾಮಿ, ಈರಣ್ಣ, ರಾಕೇಶ್, ಗುರುಲಿಂಗಪ್ಪ, ದಿಲೀಪ್, ದ್ಯಾಮಣ್ಣ, ಬಸವರಾಜ್, ರವಿಕುಮಾರ್ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು, ರೈತ ಮುಖಂಡರು, ಹೋರಾಟಗಾರರು ಉಪಸ್ಥಿತರಿದ್ದರು.