ಶಿಗ್ಗಾಂವಿ: ಸರ್ಕಾರಿ ನೌಕರರ ಹುದ್ದೆ ಶಾಶ್ವತವಲ್ಲ, ಸಿಕ್ಕಿರುವ ಸರ್ಕಾರಿ ನೌಕರಿಯಲ್ಲಿ ಪ್ರಾಮಾಣಿಕ ಕಾರ್ಯನಿರ್ವಹಿಸಿದರೆ ಮಾತ್ರ ಜನಮನದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಪ್ರಸಕ್ತ ದಿನಮಾನಗಳಲ್ಲಿ ಸರ್ಕಾರಿ ನೌಕರರು ತೀವ್ರ ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಜನಪ್ರತಿನಿಧಿಗಳು, ವಿರೋಧ ಪಕ್ಷದ ಹಾಗೂ ಸಾರ್ವಜನಿಕರ ಒತ್ತಡವೂ ಇರುತ್ತದೆ. ಎಲ್ಲರನ್ನು ಮೆಚ್ಚಿಸುವ ರೀತಿಯಲ್ಲಿ ಸರ್ಕಾರಿ ನೌಕರರು ತಮ್ಮ ಕೆಲಸ ಮಾಡಬೇಕಿದೆ ಎಂದರು.
ಶಾಸಕ ಯಾಸೀರಖಾನ್ ಪಠಾಣ ಮಾತನಾಡಿ, ಉತ್ತಮ ಆಡಳಿತ, ರಾಜ್ಯದ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದು. ಸಾಮಾಜಿಕ, ಆರ್ಥಿಕ ಕ್ಷೇತ್ರದ ಅಸಮತೋಲನ ದೂರವಾಗಬೇಕು. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ನಾನು ಸಿದ್ಧ ಎಂದರು.ಶಿಗ್ಗಾಂವಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಉತ್ತಮ ಸರ್ಕಾರಿ ನೌಕರರನ್ನು ಗೌರವಿಸಲಾಯಿತು. ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು. ಸಂಗನಬಸವ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದರು. ತಾಪಂ ಇಒ ಮಂಜುನಾಥ ಸಾಳೊಂಕಿ, ಬಿಇಒ ಎಂಬಿ ಅಂಬಿಗೇರ, ಮಲ್ಲೇಶ ಕರಿಗಾರ, ಸಿಡಿಪಿಒ ಗಣೇಶ ಲಿಂಗನಗೌಡ್ರ, ಆರೋಗ್ಯ ಅಧಿಕಾರಿ ಡಾ. ಸತೀಶ ಎ.ಆರ್., ಸರಸ್ವತಿ ಗಜಕೋಶ, ಗೀತಾಂಜಲಿ ತೆಪ್ಪದ, ಬಸವರಾಜ ಎಸ್., ಮಲ್ಲಿಕಾರ್ಜುನ ಬಳ್ಳಾರಿ, ರಮೇಶ ಹರಿಜನ, ಶಬ್ಬಿರ್ ಮನಿಯಾರ, ವಿವಿಧ ಜಿಲ್ಲೆಗಳ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.