ಸವಣೂರು:ಪ್ರಸ್ತುತ ದಿನದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರದ ಅವಶ್ಯಕತೆಯಿದೆ. ಮಠ ಮಾನ್ಯಗಳು ಮಾತ್ರ ಸಂಸ್ಕಾರ ನೀಡುವ ಕೇಂದ್ರಗಳಾದರೆ ಸಾಲದು. ನಮ್ಮ ಮನೆಗಳು ಸಹ ಸಂಸ್ಕೃತಿ, ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.ತಾಲೂಕಿನ ಕಲಿವಾಳ ಗ್ರಾಮದಲ್ಲಿ ಜರುಗುತ್ತಿರುವ ಪರಿವರ್ತನೆಯಡೆಗೆ ಧರ್ಮ ಜಾಗೃತಿ ಪ್ರವಚನ ಕಾರ್ಯಕ್ರಮದಲ್ಲಿ ಗುರುವಾರ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಇಂದಿನ ಮಕ್ಕಳಲ್ಲಿ ಬುದ್ಧಿಶಕ್ತಿಯ ಕೊರತೆಯಿಲ್ಲ ಆದರೆ, ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು. ನಮ್ಮ ದೇಶ ಸಂಸ್ಕೃತಿ, ಸಂಸ್ಕಾರ ಹಾಗೂ ಆಧ್ಯಾತ್ಮಿಕತೆಯ ತವರೂರು. ಈ ದಿವ್ಯ ಪರಂಪರೆಯನ್ನು ಪ್ರತಿಯೊಬ್ಬರು ಸಹ ಅರಿಯಬೇಕಾಗಿದೆ. ಭಾರತದ ಜ್ಞಾನ ಪರಂಪರೆಯು ಜಗತ್ತಿನ ಬೇರಾವ ದೇಶದಲ್ಲಿ ಕಾಣಲು ಸಾಧ್ಯವಿಲ್ಲ, ಇಂದಿನ ಮಕ್ಕಳು ಹೇಳಿದ್ದನ್ನು ಮಾಡುವುದಿಲ್ಲ, ನೋಡಿದ್ದನ್ನು ಮಾಡುತ್ತವೆ ಆದ್ದರಿಂದ ತಂದೆ-ತಾಯಿಗಳು ಮಕ್ಕಳಿಗೆ ಚಿಕ್ಕನಿಂದಲೇ ರಾಮಯಣ, ಮಹಾಭಾರತ, ಭಗವದ್ಗೀತೆ, ಸಿದ್ಧಾಂತ ಶಿಖಾಮಣಿ, ಶರಣರ ವಚನ, ಶ್ಲೋಕಗಳ ಬಗ್ಗೆ ತಿಳಿಸಬೇಕು. ಕನಿಷ್ಠ ಪ್ರತಿದಿನ ಭಗವಂತನ ನಾಮಸ್ಮರಣೆಯ ಭಜನೆಯನ್ನು ಮನೆ ಮಂದಿಯಲ್ಲ ಮಾಡಿದರೆ ಮಕ್ಕಳು ಸಹ ಅನುಕರಣೆ ಮಾಡಿದಾಗ ಮನೆ-ಮನ ವಿಭಜನೆಯಾಗುವುದಿಲ್ಲ. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡಬೇಕು ಎಂದರು. ಪ್ರವಚನಕಾರ ಡಾ. ಗುರುಮಹಾಂತಯ್ಯ ಶಾಸ್ತ್ರಿಜೀ ಆರಾಧ್ಯಮಠ ಮಾತನಾಡಿ, ಮನುಷ್ಯ ಬರುವಾಗ ಬರಿಗೈಲಿ ಬರುವನು, ಹೋಗುವಾಗ ಬರಿಗೈಲಿ ಹೋಗುವನು. ಬದುಕಿದ್ದಾಗ ಆತ್ಮಜ್ಞಾನ ಪಡೆದುಕೊಂಡು ದಾನ ಧರ್ಮವನ್ನು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀಗಳಿಂದ ಭಕ್ತಾಧಿಗಳಿಗೆ ಭಸ್ಮ ಮತ್ತು ರುದ್ರಾಕ್ಷಿ ಧಾರಣೆ ಮಾಡಿದರು. ಗ್ರಾಮಸ್ಥರ ವತಿಯಿಂದ ಶ್ರೀಗಳಿಗೆ ನಾಣ್ಯಗಳ ತುಲಾಭಾರ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಿರೇಮರಳಿಹಳ್ಳಿಯ ಷಣ್ಮುಖಪ್ಪ ಕಮ್ಮಾರ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಇನ್ನೂ ಇದಕ್ಕೂ ಪೂರ್ವದಲ್ಲಿ ಶ್ರೀಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸದ್ಭವನಾ ಪಾದಯಾತ್ರೆ ನಡೆಸಿ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆಯ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಕಲಿವಾಳ, ಸಿದ್ದಾಪುರ, ಇಚ್ಚಂಗಿ, ಬೈರಾಪುರ, ನೆಗಳೂರ ಗ್ರಾಮಗಳ ಗ್ರಾಮಸ್ಥರು ಭಾಗಿಯಾಗಿದ್ದರು. ನಂತರ ಅನ್ನ ದಾಸೋಹ ಜರುಗಿತು. ಕುಮಾರ ಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.