ವಿಶ್ವದ ನಾಯಕತ್ವ ಭಾರತಕ್ಕೆ ನೀಡಲಿ: ಡಾ.ಈ.ಸಿ.ನಿಂಗರಾಜ್‌ಗೌಡ

KannadaprabhaNewsNetwork |  
Published : Mar 23, 2026, 01:30 AM IST
೨೨ಕೆಎಂಎನ್‌ಡಿ-೧ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆಯಿಂದ ನಡೆದ ಬೇವು-ಬೆಲ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಬಿಜೆಪಿ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿದರು. | Kannada Prabha

ಸಾರಾಂಶ

ಯುದ್ಧದಿಂದ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವವರು ಸಾಮಾನ್ಯ ಜನರು. ತೈಲ ಮತ್ತು ಅಡುಗೆ ಅನಿಲಕ್ಕೆ ಸಮಸ್ಯೆ ಎದುರಾಗಿದೆ. ಆದರೂ ಪರಮಾಣು ಘಟಕಗಳ ಮೇಲೂ ಅಮೆರಿಕ ದಾಳಿ ನಡೆಸುತ್ತಿದೆ. ಅಮೆರಿಕದ ಯುದ್ಧೋನ್ಮಾದ ಸ್ಥಿತಿ ಭೀಕರ ಆತಂಕವನ್ನು ಸೃಷ್ಟಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತ ಶಾಂತಿಪ್ರಿಯ ದೇಶ. ಯುದ್ಧದ ಕಾರ್ಮೋಡ ದೂರ ಸರಿದು ಶಾಂತಿ ನೆಲೆಸಬೇಕಾದರೆ ಭಾರತಕ್ಕೆ ನಾಯಕತ್ವ ನೀಡಬೇಕು. ಆ ಮೂಲಕ ವಿಶ್ವಗುರುವಾಗಬೇಕು ಎಂದು ಬಿಜೆಪಿ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಡೆದ ಬೇವು-ಬೆಲ್ಲ ಸಂಭ್ರಮ, ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಭಾವನೆಗಳ ಬಣ್ಣ, ಹೊಸ ಭಾವ ಕೃತಿಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯುದ್ಧವನ್ನು ಯಾರೂ ಬಯಸಿರಲಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಚ್ಚಾಟದ ಪರಿಣಾಮ ಯುದ್ಧ ಎದುರಾಗಿದೆ. ಯುದ್ಧದಿಂದ ಸಾಮಾನ್ಯ ಜನರ ನೆಮ್ಮದಿ ಹಾಳಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸಾವಿಗೀಡಾಗಿದ್ದಾರೆ. ವಿವಿಧ ರಾಷ್ಟ್ರಗಳ ನಡುವಿನ ವ್ಯಾಪಾರ- ವಹಿವಾಟು ಅತಂತ್ರವಾಗಿದೆ. ಅಸ್ಥಿರತೆ ಎಲ್ಲೆಡೆ ಆವರಿಸಿದೆ. ಆರ್ಥಿಕ ಸಂಕಷ್ಟ ಎದುರಾಗಿದೆ. ಇದ್ಯಾವುದರ ಕನಿಷ್ಠ ಪ್ರಜ್ಞೆ ಇಲ್ಲದೆ ಅಧಿಕಾರದ ಸಾರ್ವಭೌಮತ್ವ ಸಾಧಿಸುವುದೇ ಅಮೆರಿಕದ ಪ್ರಮುಖ ಗುರಿಯಾಗಿದೆ ಎಂದು ನುಡಿದರು.

ಭಾರತ ಎಂದಿಗೂ ಯಾರನ್ನೂ ಯುದ್ಧಕ್ಕೆ ಪ್ರಚೋದಿಸುವುದಿಲ್ಲ. ವಿಶ್ವದ ಬಹುತೇಕ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಇದೇ ಕಾರಣಕ್ಕೆ ಯುದ್ಧದ ಸನ್ನಿವೇಶದಲ್ಲೂ ಪರಿಸ್ಥಿತಿಯನ್ನು ಬಹಳ ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದೆ. ಅಮೆರಿಕ, ಇರಾನ್ ರಾಷ್ಟ್ರಗಳನ್ನೂ ತನ್ನ ವಿಶ್ವಾಸದಲ್ಲಿರಿಸಿಕೊಂಡೇ ಅಡುಗೆ ಅನಿಲ, ತೈಲ ಸರಬರಾಜು ಸುಗಮವಾಗಿ ಭಾರತ ತಲುಪುವಂತೆ ಮಾಡುತ್ತಿದೆ. ಹಾಗಾಗಿ ಭಾರತ ವಿಶ್ವದ ನಾಯಕತ್ವ ವಹಿಸಿಕೊಂಡರೆ ಎಲ್ಲೆಡೆ ಶಾಂತಿ ನೆಳೇಸಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ೨೦೧೪ರಿಂದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಶ್ರಮಿಸುತ್ತಿದ್ದವರಿಗೆ ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಅನೇಕ ಅತ್ಯುನ್ನತ ಗೌರವಗಳನ್ನು ನೀಡಿದ್ದಾರೆ. ಅದಕ್ಕೆ ಪುಸ್ತಕ ಪ್ರೇಮಿ ಅಂಕೇಗೌಡರೇ ಸಾಕ್ಷಿಯಾಗಿದ್ದಾರೆ. ೨೦ ಲಕ್ಷದಷ್ಟು ಪುಸ್ತಕವನ್ನು ಸಂಗ್ರಹಿಸಿ, ಸುರಕ್ಷಿತವಾಗಿಡುವುದು ಸಾಮಾನ್ಯದ ಕೆಲಸವಲ್ಲ. ಅಂತಹವರಿಗೆ ಪದ್ಮಶ್ರೀ ದೊರಕಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಯಾವ ಕ್ಷೇತ್ರದಲ್ಲಿ ಬೆಳೆಯುತ್ತಾನೋ ಆ ಕ್ಷೇತ್ರವನ್ನು ತಾತ್ಸಾರ ಮಾಡದೆ ಅದೇ ಕ್ಷೇತ್ರದಲ್ಲಿ ಮುಂದುವರಿದರೆ ಸಾಧನೆ ಸಾಧ್ಯ. ಪ್ರತಿಯೊಬ್ಬರೂ ಪುಸ್ತಕ ಓದುವುದರಿಂದ ಮನುಷ್ಯನ ಪ್ರಬುದ್ಧತೆ ಬೆಳೆಯುತ್ತದೆ ಎಂದು ಹೇಳಿದರು.

ನಾನು ನನ್ನ ಮನೆಯನ್ನೇ ಪುಸ್ತಕದ ಮನೆ ಮಾಡಿ ೨೫ ಲಕ್ಷ ಪುಸ್ತಕ ಸಂಗ್ರಹಿಸಿದ್ದೇನೆ. ನನ್ನ ಪುಸ್ತಕ ಸಂಗ್ರಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿರುವುದು ನನ್ನ ಕೆಲಸಕ್ಕೆ ಸಾರ್ಥಕತೆ ಸಿಕ್ಕಿದೆ ಎಂದರು.

ಸಾಹಿತಿಗಳಾದ ವೈ.ಎಸ್.ಮಾಣಿಕ್ಯ ರಚನೆಯ ಭಾವನೆಗಳ ಬಣ್ಣ ಹಾಗೂ ಮಂಡ್ಯ ಯಶು ರಚನೆಯ ಹೊಸಭಾವ ಕೃತಿಗಳನು ಲೋಕಾರ್ಪಣೆ ಮಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಲಬುರಗಿ ಜಿಲ್ಲಾ ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕ ಸಂತೋಷಕುಮಾರ ಕರಹರಿ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿನಕುರಳಿ ಲೋಕೇಶ್, ಆಚಾರ್ಯ ಗುರುಕುಲದ ವ್ಯವಸ್ಥಾಪಕ ನಿರ್ದೇಶಕ ಡಾ.ಮೋಹನ ಕುಮಾರ ಶಾಸ್ತ್ರಿ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಬನ್ನಂಗಾಡಿ ಸಿದ್ದಲಿಂಗಯ್ಯ, ಎಸ್.ಕೃಷ್ಣ ಸ್ವರ್ಣಸಂದ್ರ, ರಾಗಿಮುದ್ದನಹಳ್ಳಿ ನಾಗೇಶ್, ರೂಪಾ ಹೊಸಹಳ್ಳಿ ಉಪಸ್ಥಿತರಿದ್ದರು.

-------

ಯುದ್ಧದಿಂದ ಏನನ್ನೂ ಸಾಧಿಸಲಾಗದು: ಡಾ.ಕೆ.ಚಂದ್ರಶೇಖರ್

ಕನ್ನಡಪ್ರಭ ವಾರ್ತೆ ಮಂಡ್ಯ

ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಣವಲ್ಲ. ಆತನ ಮನಸ್ಥಿತಿ ಕಾರಣ. ಯುದ್ಧದಿಂದ ಏನನ್ನೂ ಪಡೆಯಲೂ ಸಾಧ್ಯವಿಲ್ಲ. ಮಹಾನ್ ಸಾಧನೆಯನ್ನೂ ಮಾಡಲಾಗುವುದಿಲ್ಲ. ಯುದ್ಧದ ಪರಿಣಾಮಗಳನ್ನು ಎದುರಿಸುವವರು ಸಾಮಾನ್ಯ ಜನರು ಮಾತ್ರ ಎಂದು ಖ್ಯಾತ ವೈದ್ಯ, ಸಾಹಿತಿ ಡಾ.ಕೆ.ಚಂದ್ರಶೇಖರ್ ಹೇಳಿದರು.

ಪ್ರಧಾನ ಭಾಷಣ ಮಾಡಿದ ಅವರು, ಯುದ್ಧದಿಂದ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವವರು ಸಾಮಾನ್ಯ ಜನರು. ತೈಲ ಮತ್ತು ಅಡುಗೆ ಅನಿಲಕ್ಕೆ ಸಮಸ್ಯೆ ಎದುರಾಗಿದೆ. ಆದರೂ ಪರಮಾಣು ಘಟಕಗಳ ಮೇಲೂ ಅಮೆರಿಕ ದಾಳಿ ನಡೆಸುತ್ತಿದೆ. ಅಮೆರಿಕದ ಯುದ್ಧೋನ್ಮಾದ ಸ್ಥಿತಿ ಭೀಕರ ಆತಂಕವನ್ನು ಸೃಷ್ಟಿಸಿದೆ. ಯುದ್ಧದಿಂದ ಸಾಕಷ್ಟು ಅನಾಹುತಗಳು ಸಂಭವಿಸಿದ್ದರೂ ಶಾಂತಿಯ ಮಂತ್ರವನ್ನು ಯಾರೂ ಜಪಿಸುತ್ತಿಲ್ಲ. ದಿನೇ ದಿನೇ ಸಾವು-ನೋವು ಹೆಚ್ಚುತ್ತಲೇ ಇದೆ. ಭಯ, ಆತಂಕದ ಕಾರ್ಮೋಡ ಎಲ್ಲೆಡೆ ಆವರಿಸಿದೆ ಎಂದು ವಿಷಾದಿಸಿದರು.

ಹೊಸ ಜೀವಕಳೆ, ನವ ಚೈತನ್ಯ, ಹೊಸ ಹುರುಪು, ಹೊಸತನವನ್ನು ತಂದುಕೊಡಬೇಕಾದ ಸಂಭ್ರಮದ ಸಮಯದಲ್ಲಿ ನೋವು, ಆಕ್ರಂದನ, ಹಿಂಸೆ, ಬೆಂಕಿಯ ಜ್ವಾಲೆಯನ್ನು ಸೃಷ್ಟಿಸುತ್ತಾ ವಿನಾಶದತ್ತ ಕೊಂಡೊಯ್ಯುತ್ತಿದೆ. ಯುದ್ಧದಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವುದಕ್ಕಿಂತ ಏನನ್ನು ಸಾಧಿಸಿದರು ಎನ್ನುವುದು ಮುಖ್ಯವಾಗುತ್ತದೆ. ಯುದ್ಧವನ್ನು ಯಾರೂ ಬಯಸಬಾರದು. ವಿಶ್ವಪ್ರೇಮವನ್ನು ಎಲ್ಲರೂ ಮನಸ್ಸಿನಲ್ಲಿ ತಂದುಕೊಂಡಾಗ ಯುದ್ಧಗಳು ಸಂಭವಿಸುವುದೇ ಇಲ್ಲ. ದ್ವೇಷ, ಅಸೂಯೆ, ಅಹಂಕಾರ, ಅಧಿಕಾರ ದಾಹದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಶಾಂತಿ, ಸಹಬಾಳ್ವೆ, ಸ್ನೇಹಮಯ ವ್ಯಕ್ತಿತ್ವವಿದ್ದಾಗ ಮಾತ್ರ ಇಡೀ ವಿಶ್ವವನ್ನು ಗೆಲ್ಲಲು ಸಾಧ್ಯ. ಅಂತಹ ಮನೋಭಾವ ಎಲ್ಲರಲ್ಲೂ ಮೂಡಲಿ ಎಂದು ಆಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಊದಿನಕಡ್ಡಿ ವಾಸನೆಗೆ ಹಣ ಕಳೆದುಕೊಂಡ ಜನ
ಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆಗಳಿಂದ ಉತ್ತಮ ಸಮಾಜ ನಿರ್ಮಾಣ: ಹನುಮಂತಯ್ಯ