ಕನ್ನಡಪ್ರಭ ವಾರ್ತೆ ಕಾರ್ಕಳ
ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಹೋರಾಟಗಾರರ ಬಲಿದಾನವಿದೆ. ಅವರನ್ನು ನೆನಪಿಸುವ ಕಾರ್ಯ ನಮ್ಮಿಂದವಾಗಬೇಕು ಎಂದು ಕಾರ್ಕಳ ತಹಸೀಲ್ದಾರ್ ನರಸಪ್ಪ ಹೇಳಿದರು.ಅವರು ಕಾರ್ಕಳ ಗಾಂಧಿ ಮೈದಾನದಲ್ಲಿ ೭೮ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಧ್ವಜಾರೋಹಣದ ಬಳಿಕ ಮಂಜುನಾಥ ಪೈ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಆರ್ಥಿಕವಾಗಿ ಜಗತ್ತಿನ ಮೂರನೇ ಶಕ್ತಿಯಾಗಿ ಹೊರಹೊಮ್ಮಲಿದೆ. ಸಾಮಾಜಿಕ ಪರಿವರ್ತನೆಯ ಕಾರ್ಯದಲ್ಲಿ ನಾವೆಲ್ಲರೂ ಜೊತೆಯಾಗಿ ಹೆಜ್ಜೆಯಿಟ್ಟು ಭಾರತವನ್ನು ಶಕ್ತಿಶಾಲಿಯನ್ನಾಗಿಸುವುದು ನಮ್ಮ ಮೇಲಿದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮಾತನಾಡಿದರು.ಸನ್ಮಾನ ಕಾರ್ಯಕ್ರಮ:೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಾದ ಸಹನಾ ಎನ್., ಶೋಧನ್ ಆರ್. ಹೆಗ್ಡೆ, ರಿಯನ್ ಸಾಲ್ಡನಾ, ಪ್ರತೀಕ್ ಜೈನ್, ಕನ್ನಡ ಮಾಧ್ಯಮದಲ್ಲಿ ಉತ್ತಮ ಅಂಕ ಪಡೆದ ವಿನಮ್ರ ಆಚಾರ್ಯ, ನಿಶಿತಾ ಕೆ. ಶೆಟ್ಟಿ, ಶಿವರಾಜ್ ಹೆಗ್ಡೆ, ಸೌಮ್ಯ ಹಾಗೂ ಮನೀಷ್ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸೌಮ್ಯ, ಸೌಮ್ಯ, ಜೋನ್ ಪೌಲ್ಸ್, ರಕ್ಷಿತಾ, ಸಾನ್ವಿ ರಾವ್, ಭಕ್ತಿ ಕಾಮತ್, ಚೈತ್ರ ಕಾಮತ್, ಸಮ್ಯಕ್ ಆರ್. ಪ್ರಭು, ಅಮೃತ್ ಆರ್., ಚಿನ್ಮಯಿ ಆರ್. ದೇಶ್‌ಪಾಂಡೆ, ಕುಶಿ ಹೆಗ್ಡೆ ಹಾಗೂ ಸಂಜನಾ ಸಂಜಯ್ ಪಾಟ್ಕರ್ ಅವರನ್ನು ಸನ್ಮಾನಿಸಲಾಯಿತು.ಆಕರ್ಷಕ ಪಥಸಂಚಲನ: ಅನಂತಶಯನ ವೃತ್ತದಲ್ಲಿ ಪುರಸಭೆಯ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಆ ಬಳಿಕ ಎನ್‌ಸಿಸಿ, ಸೇವಾದಳ ಸೇರಿದಂತೆ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಗಾಂಧಿ ಮೈದಾನದ ವರೆಗೆ ಸಾಗಿ ಬಂದರು. ಗಾಂಧಿ ಮೈದಾನದಲ್ಲಿ ಪೊಲೀಸ್ ಇಲಾಖೆ ಮತ್ತು ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಭುವನೇಂದ್ರ ಪ್ರೌಢಶಾಲಾ ಶಿಕ್ಷಕ ಸಂಜಯ್ ಕಾರ್ಯಕ್ರಮ ನಿರ್ವಹಿಸಿದರು. ಆಕರ್ಷಕ ಪಥಸಂಚಲನಕ್ಕಾಗಿ ಪೆರ್ವಾಜೆ ಪ್ರಾಥಮಿಕ ಶಾಲೆ, ಕ್ರೈಸ್ಟ್ ಕಿಂಗ್ ಪ್ರೌಢಶಾಲೆ ಹಾಗೂ ಭುವನೇಂದ್ರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.ಪೆರ್ವಾಜೆ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ದೇವದಾಸ್ ಕೆರೆಮನೆ ಮತ್ತು ಶಿಕ್ಷಕ ಗಣೇಶ್ ಜಾಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಲೋಕೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಪುರಸಭಾ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.