ಪರಂಪರೆ, ಸಾಮರಸ್ಯ ಬೆಳೆಸುವ ಕೆಲಸವಾಗಲಿ

KannadaprabhaNewsNetwork |  
Published : Nov 20, 2024, 12:31 AM IST
೧೭ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಒಳ್ಳೆಯ ಮನಸ್ಸುಗಳ ಒಕ್ಕೂಟದ ವತಿಯಿಂದ ಕಾರ್ತಿಕ ದೀಪೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳನ್ನು ಗೌರವಿಸಲಾಯಿತು. ಚೈತನ್ಯ ವೆಂಕಿ, ಓ.ಡಿ.ಸ್ಟೀಫನ್, ಸುರೇಂದ್ರ, ಎಚ್.ಗೋಪಾಲ್, ಉಪೇಂದ್ರ ಇದ್ದರು. | Kannada Prabha

ಸಾರಾಂಶ

ಸಮಾಜದಲ್ಲಿ ಇಂದು ಎಲ್ಲ ರಂಗದಲ್ಲಿ ವ್ಯವಸ್ಥೆಗಳು ಕೆಡುತ್ತಿದೆ. ಯುವ ಜನಾಂಗ ಗೊತ್ತು ಗುರಿಯಿಲ್ಲದೆ ಮುಂದೆ ಸಾಗುತ್ತಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಶಿಸಿ ಹೋಗುತ್ತಿದೆ. ಭಾರತೀಯ ಸಂಸ್ಕೃತಿ, ಆದರ್ಶ ಪರಂಪರೆ, ಸಾಮರಸ್ಯ ಬೆಳೆಸುವಂತಹ ಕೆಲಸ ಆಗಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಸಮಾಜದಲ್ಲಿ ಇಂದು ಎಲ್ಲ ರಂಗದಲ್ಲಿ ವ್ಯವಸ್ಥೆಗಳು ಕೆಡುತ್ತಿದೆ. ಯುವ ಜನಾಂಗ ಗೊತ್ತು ಗುರಿಯಿಲ್ಲದೆ ಮುಂದೆ ಸಾಗುತ್ತಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಶಿಸಿ ಹೋಗುತ್ತಿದೆ. ಭಾರತೀಯ ಸಂಸ್ಕೃತಿ, ಆದರ್ಶ ಪರಂಪರೆ, ಸಾಮರಸ್ಯ ಬೆಳೆಸುವಂತಹ ಕೆಲಸ ಆಗಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.ರಂಭಾಪುರಿ ಪೀಠದ ಕಾರ್ತಿಕ ದೀಪೋತ್ಸವದ ಅಂಗವಾಗಿ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಇಂದಿನ ರಾಜಕಾರಣಿಗಳು ಭಾರತೀಯ ಸಂಸ್ಕೃತಿ, ಪರಂಪರೆ ಚಟುವಟಿಕೆಗೆ ಆದ್ಯತೆ ನೀಡಬೇಕು. ಜಾತಿಗಳನ್ನು ಎತ್ತಿಕಟ್ಟಿ ಜಾತಿ ನಡುವೆ ಸಂಘರ್ಷಕ್ಕೆ ಈಡು ಮಾಡುವುದಾಗಲಿ, ಸುಮ್ಮನೇ ಸಂಘರ್ಷದ, ದ್ವೇಷದ ಮಾತುಗಳನ್ನು ಆಡಿ ಕಾಲ ಕಳೆಯುವುದು ಸರಿಯಲ್ಲ. ಸಮಗ್ರ ಅಭಿವೃದ್ಧಿ ದೆಸೆಯಲ್ಲಿ ಕಾರ್ಯನಿರ್ವಹಿಸಿ ಅಭಿವೃದ್ಧಿ ಮಾಡಿದರೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಸಮಾಜಮುಖಿಯಾದ ರಾಜಕಾರಣ ಇಂದು ಹಲವೆಡೆ ಕಂಡುಬರುತ್ತಿಲ್ಲ. ಇದರ ಅವಶ್ಯಕತೆ ಬಹಳಷ್ಟು ಇದೆ ಎಂದರು. ರಂಭಾಪುರಿ ಪೀಠದಲ್ಲಿ ಪ್ರಸ್ತುತ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಪೀಠದೊಂದಿಗೆ ಯುವಜನರು ಸಂಪರ್ಕ ಇಟ್ಟುಕೊಳ್ಳಬೇಕು. ಡಿ. 15ರಂದು ರಂಭಾಪುರಿ ಪೀಠದ ಲಿಂಗೈಕ್ಯ ಜಗದ್ಗುರು ಶ್ರೀ ವೀರರುದ್ರ ಮುನಿದೇವ ಶಿವಾಚಾರ್ಯರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಒಂದು ದಿನದ ಕಾಲ ಅದ್ಧೂರಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ ಸಚಿವ ಬಿ. ಈಶ್ವರ್ ಖಂಡ್ರೆ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಶಾಸಕ ಟಿ.ಡಿ. ರಾಜೇಗೌಡ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಬೇಕು ಎಂಬ ಉದ್ದೇಶ ಹೊಂದಲಾಗಿದೆ. ಜಗದ್ಗುರುಗಳ ಕುರಿತು ಕೃತಿ ರಚನೆಗೊಂಡಿದ್ದು, ಅದರ ಬಿಡುಗಡೆಯೂ ನಡೆಯಲಿದೆ ಎಂದರು.ಈ ಭಾಗದಲ್ಲಿ ಮೊತ್ತ ಮೊದಲ ಬಾರಿಗೆ ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜು ಆರಂಭಿಸಿ ಯುವಕರಿಗೆ ಉದ್ಯೋಗ ಭದ್ರತೆ ನೀಡಿದ್ದಾರೆ. ಪ್ರಸ್ತುತ ಐಟಿಐ ಕಾಲೇಜು ತನ್ನದೇ ಆದ ಸ್ವಂತ ಕಟ್ಟಡ ಹೊಂದಿದೆ. ಉತ್ತಮ ಫಲಿತಾಂಶವೂ ಪ್ರತೀ ವರ್ಷ ಬರುತ್ತಿದ್ದು, ಇಲ್ಲಿ ವ್ಯಾಸಂಗ ಮಾಡಿದವರು ಉತ್ತಮ ಉದ್ಯೋಗದ ಉನ್ನತ ಸ್ಥಾನಮಾನ ಹೊಂದಿದ್ದಾರೆ ಎಂದು ತಿಳಿಸಿದರು.ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದ ಸಂಯೋಜಕ ಚೈತನ್ಯ ವೆಂಕಿ ಮಾತನಾಡಿ, ರಂಭಾಪುರಿ ಪೀಠ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದ ಧಾರ್ಮಿಕ ಕ್ಷೇತ್ರವಾಗಿದ್ದು, ಜಗದ್ಗುರು ಶ್ರೀ ಪೀಠವನ್ನು ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಒಳ್ಳೆಯ ಮನಸ್ಸುಗಳ ಒಕ್ಕೂಟ ಇನ್ನು ಮುಂದೆ ಪ್ರತೀ ವರ್ಷ ಶ್ರೀಪೀಠದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶ್ರೀಪೀಠದ ಆಶೀರ್ವಾದಕ್ಕೆ ಪಾತ್ರವಾಗಲಿದೆ ಎಂದರು.

ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದ ಸದಸ್ಯರಾದ ಎಚ್.ಗೋಪಾಲ್, ಸುರೇಂದ್ರ ಮಾಸ್ತರ್, ಉಪೇಂದ್ರ ಆಚಾರ್ಯ, ಸದಾಶಿವ, ಬಿ.ಎಸ್.ನಾಗರಾಜ್ ಭಟ್, ಸಿ.ವಿ. ಸುನೀಲ್ ಮತ್ತಿತರರು ಹಾಜರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ