ಯಲ್ಲಾಪುರ: ಉಕ ಜಿಲ್ಲೆಯನ್ನೇ ಭಗವದ್ಗೀತಾ ಜಿಲ್ಲೆಯೆಂದು ಘೋಷಿಸುವಂತಾಗಬೇಕು. ರಾಜ್ಯದಲ್ಲಿ ಉತ್ತಮವಾಗಿ ಅಭಿಯಾನ ನಡೆದಿದೆ. ಈ ವರ್ಷ ಜಿಲ್ಲೆಯಲ್ಲಿ ೮೦೦ ಕೇಂದ್ರ ಅದರಲ್ಲಿ ೪೦೦ ಕೇಂದ್ರ ಯಲ್ಲಾಪುರದಲ್ಲೇ ನಡೆದಿದೆ. ಇಲ್ಲಿನ ಸಂಘಟಕರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಸಂಯಮ ನಮ್ಮನ್ನು ಜ್ಞಾನ ಮಾರ್ಗಕ್ಕೆ ಕೊಂಡೊಯ್ಯುತ್ತದೆ. ಅದನ್ನು ಮರೆತು ಆತುರತೆಗೆ ಬಲಿಯಾದರೆ ಬದುಕು ಅಧಃಪತನದತ್ತ ಸಾಗುತ್ತದೆ. ಗೀತೆಯನ್ನು ಓದಿ, ಅರ್ಥೈಸಿಕೊಂಡು, ಆಚರಿಸುವತ್ತ ಗಮನ ಹರಿಸಿ, ಬದುಕಿನ ಶ್ರೇಷ್ಠತೆ ರೂಪಿಸಿಕೊಳ್ಳಬೇಕು. ಮನಸ್ಸಿನ ನಿಯಂತ್ರಣ ಸಾಧಿಸಿದವ ಮಾತ್ರ ಯೋಗಿಯಾಗುತ್ತಾನೆ. ಗೀತೆ ವೈಜ್ಞಾನಿಕ ಚಿಂತನೆಯನ್ನೂ ಹೊಂದಿದೆ. ಸುಖ, ದುಃಖ, ಸಂಪತ್ತುಗಳು ಅನಿತ್ಯವಾದದ್ದು. ಜ್ಞಾನ ಮಾತ್ರ ನಿತ್ಯವಾದದ್ದು. ಆದ್ದರಿಂದ ಗೀತೆಯನ್ನು ನಿತ್ಯ ಜೀವನದಲ್ಲಿ ಪಠಿಸಿ, ಹಂತ ಹಂತವಾಗಿ ಅಧ್ಯಯನ ಮಾಡಿ, ಅದರ ಜ್ಞಾನದ ಅರಿವನ್ನು ಮಾಡಿಕೊಳ್ಳಬೇಕು ಎಂದರು.
ಶಿರಳಗಿ ಮಠದ ಶ್ರೀ ಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಂಸಾರದ ಜಂಜಾಟದ ಮಧ್ಯೆ ಶಾಂತಿ, ನೆಮ್ಮದಿ ಪಡೆಯುವ, ಬಯಸುವವರಿಗೆ ಭಗವದ್ಗೀತೆಯ ಅಧ್ಯಯನ ಸೂಕ್ತ ಮಾರ್ಗ. ಗೀತೆಯ ಶ್ಲೋಕಗಳನ್ನು ಪಠಣ ಮಾಡುವುದು ಮೊದಲ ಹಂತ. ಮುಂದೆ ಅದನ್ನು ಕಂಠಸ್ಥ ಮಾಡಬೇಕು, ಆನಂತರ ಅರ್ಥಾನುಸಂಧಾನ ಮಾಡಬೇಕು. ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ಸಾಮಾನ್ಯ ಜನರಿಗೂ ವೇದದ ಸಾರ ಸಿಗಲಿ ಎಂದು ಕೃಷ್ಣ ಗೀತೆಯನ್ನು ನೀಡಿದ್ದಾನೆ. ನಮ್ಮ ಬದುಕನ್ನು ಬದಲಾಯಿಸಿಕೊಳ್ಳುವ ಜತೆಗೆ, ಪ್ರಪಂಚವನ್ನು ಬದಲಾಯಿಸಲು ಸಾಧ್ಯ ಎಂದರು.ನೆಲೆಮಾವು ಮಠದ ಶ್ರೀಮಜ್ಜಗದ್ಗುರು ಮಾಧವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಗೀತೆಯ ಸಾರ ಭವಿಷ್ಯದಲ್ಲಿಯೂ ಪ್ರಸ್ತುತ. ಬದುಕಿನ ಪಾಪ ಕಳೆದುಕೊಳ್ಳಲು ಗೀತಾ ಪಠಣ, ಗಂಗಾಸ್ನಾನ ಹಾಗೂ ಗಾಯತ್ರಿ ಪಠಣದಿಂದ ಸಾಧ್ಯ. ಗೀತೆಯಲ್ಲಿ ಹೇಳಿದಂತೆ ಧರ್ಮ ಮಾರ್ಗದಲ್ಲಿ ಸಾಗಿದಾಗ ಮಾತ್ರ ಬದುಕಿನ ಸಮರದಲ್ಲಿ ನಾವು ಜಯಿಸಬಹುದು ಎಂದರು.
ನಾಯಕನಕೆರೆ ಶ್ರೀ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ, ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್ಟ ಜೋಗಿನಜಡ್ಡಿ ಉಪಸ್ಥಿತರಿದ್ದರು.ತಾಲೂಕು ಮಟ್ಟದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಏಕಕಂಠದಲ್ಲಿ ಭಗವದ್ಗೀತೆಯ ೯ನೇ ಅಧ್ಯಾಯವನ್ನು ಶ್ರೀಗಳ ಸಮ್ಮುಖದಲ್ಲಿ ಪಠಿಸಿದರು.
ಗಣಪತಿ ಭಟ್ಟ ಕೋಲಿಬೇಣ ಸಂಗಡಿಗರು ವೇದಘೋಷಗೈದರು. ಕೇಂದ್ರ ಮಾತೃ ಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ ಸಂಗಡಿಗರು ಭಗವದ್ಗೀತೆಯ ಆರತಿ ಗೀತೆ ಹಾಡಿದರು. ಜಿಲ್ಲಾ ಸಂಚಾಲಕ ಕೆ.ಜಿ. ಬೋಡೆ ವರದಿ ವಾಚಿಸಿದರು. ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಮುರಳೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರ ಸಮಿತಿ ಸದಸ್ಯ ಡಾ. ಶಂಕರ ಭಟ್ಟ ಬಾಲೀಗದ್ದೆ ಸ್ವಾಗತಿಸಿ, ನಿರ್ವಹಿಸಿದರು. ಲಕ್ಷ್ಮೀನಾರಾಯಣ ಗುಮ್ಮಾನಿ ವಂದಿಸಿದರು.ಕಾರ್ಯಕ್ರಮಕ್ಕೂ ಮುನ್ನ ಮಾಗೋಡ ಕ್ರಾಸ್‌ನಿಂದ ಯತಿತ್ರಯರನ್ನು ಮೆರವಣಿಗೆಯ ಮೂಲಕ ದೇವಸ್ಥಾನದ ವರೆಗೆ ಕರೆತರಲಾಯಿತು. ಪೂರ್ಣಕುಂಭ, ಚಂಡೆವಾದನ, ವೇದಘೋಷ ಮೆರವಣಿಗೆಯ ಶೋಭೆ ಹೆಚ್ಚಿಸಿದವು.