ಕನ್ನಡಪ್ರಭ ವಾರ್ತೆ ಮಡಿಕೇರಿ
ಗ್ರಾಮೀಣ ಕ್ರೀಡೆಯಾಗಿ ಖ್ಯಾತಿ ಪಡೆಯುತ್ತಿರುವ ಕಬಡ್ಡಿ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಕಾರ್ಯವಾಗಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.ನಗರದ ಗಾಂಧಿ ಮೈದಾನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಜಿಲ್ಲೆ 3181 ನಲ್ಲಿ ರೋಟರಿ ಸದಸ್ಯರಿಗಾಗಿ ಮೊದಲ ಬಾರಿಗೆ ಆಯೋಜಿತ ಕಬ್ಬಡಿ ಪಂದ್ಯಾಟ ಉದ್ಠಾಟಿಸಿ ಮಾತನಾಡಿದರು.
ಇತ್ತೀಚಿನ ವಷ೯ಗಳಲ್ಲಿ ಪ್ರೀಮಿಯರ್ ಲೀಗ್ ಮೂಲಕ ಹೆಸರುವಾಸಿಯಾಗುತ್ತಿರುವ ಕಬ್ಬಡಿ ಬಗ್ಗೆ ಮಕ್ಕಳಲ್ಲಿಯೂ ಆಸಕ್ತಿ ಮೂಡಿಸಿ ಪ್ರೋತ್ಸಾಹ ನೀಡುವಂತಾದಲ್ಲಿ ಗ್ರಾಮೀಣ ಕ್ರೀಡೆಯಾದ ಕಬ್ಬಡಿಗೆ ಹೆಚ್ಚಿನ ಬೆಂಬಲ ದೊರಕಿದಂತಾಗುತ್ತದೆ ಎಂದರು.ರೋಟರಿ ಜಿಲ್ಲೆ 3181 ನ ಗವರ್ನರ್ ವಿಕ್ರಂದತ್ತ ಸಭಾ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ರೋಟರಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕಬ್ಬಡಿ ಪಂದ್ಯಾಟ ಆಯೋಜಿಸಿರುವ ದಾಖಲೆಗೆ ಪಾತ್ರವಾಗಿದೆ ಎಂದರು. ಈ ಮೂಲಕ ರೋಟರಿ ಸದಸ್ಯರಲ್ಲಿ ಕಬ್ಬಡಿ ಪಂದ್ಯಾಟದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲಾಗಿದೆ ಎಂದರು.ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ನ ನಿವೃತ್ತ ಜಂಟಿ ಕಾರ್ಯದರ್ಶಿ ಹೊಸೂಕ್ಲು ಉತ್ತಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕಬ್ಬಡಿಯನ್ನು ಪ್ರೋತ್ಸಾಹಿಸು ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ನ ಕಬ್ಬಡಿ ಪಂದ್ಯಾವಳಿ ಸಂಚಾಲಕ ಜಯಂತ್ ಪೂಜಾರಿ ಮಾತನಾಡಿ, ಇದೇ ಮೊದಲ ಬಾರಿಗೆ ರೋಟರಿ ಸದಸ್ಯರಿಗಾಗಿ ಆಯೋಜಿತ ಕಬ್ಬಡಿ ಪಂದ್ಯಾಟಕ್ಕೆ ಉತ್ತಮ ಸ್ಪಂದನ ದೊರಕಿದೆ. ಆಧುನಿಕ ದಿನಗಳಲ್ಲಿ ಕಬ್ಬಡಿಯಂಥ ಜನಪದ ಕ್ರೀಡೆಗೂ ಪ್ರೋತ್ಸಾಹ ನೀಡಿ ಆ ಕ್ರೀಡೆಯ ಮಹತ್ವವನ್ನು, ಸವಾಲುಗಳನ್ನು ರೋಟರಿ ಸದಸ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಮಿಸ್ಟಿ ಹಿಲ್ಸ್ ಕಬ್ಬಡಿ ಪಂದ್ಯಾವಳಿ ಆಯೋಜಿಸಿದೆ ಎಂದು ಮಾಹಿತಿ ನೀಡಿದರು.ರೋಟರಿ ವಲಯ 6 ರ ಸಹಾಯಕ ಗವನ೯ರ್ ದೇವಣಿರ ಕಿರಣ್, ವಲಯ ಸೇನಾನಿ ಅನಿತಾ ಪೂವಯ್ಯ ವೇದಿಕೆಯಲ್ಲಿದ್ದರು.
ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್.ಟಿ. ನಿರೂಪಿಸಿದ ಕಾರ್ಯಕ್ರಮದಲ್ಲಿ ಕಬ್ಬಡಿ ಸಮಿತಿಯ ಜಂಟಿ ಸಂಚಾಲಕ ದುಗ್ಗಳ ಕಪಿಲ್ ಸ್ವಾಗತಿಸಿ, ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಕಟ್ಟೆಮನೆ ಸೋನಜಿತ್ ವಂದಿಸಿದರು.ಗಾಂಧಿ ಮೈದಾನದಲ್ಲಿ ಸುಸಜ್ಜಿತ ರೀತಿಯಲ್ಲಿ ರೂಪಿತವಾದ ಕಬ್ಬಡಿ ಮೈದಾನದಲ್ಲಿ ದಿನವಿಡೀ ರೋಟರಿ ಸದಸ್ಯರ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ರಕ್ತ ಸಂಗ್ರಹಣಾ ಶಿಬಿರಕೊಡಗು ಜಿಲ್ಲಾ ರೆಡ್ ಕ್ರಾಸ್ , ವಿವೇಕಾನಂದ ಯೂತ್ ಮೂವ್ ಮೆಂಟ್ ಮತ್ತು ಜಿಲ್ಲಾ ರಕ್ತನಿಧಿ ಕೇಂದ್ರದ ವತಿಯಿಂದ ಇದೇ ಸಂದಭ೯ ಆಯೋಜಿತ ರಕ್ತಸಂಗ್ರಹಣಾ ಶಿಬಿರವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.
ರೋಟರಿ ಜಿಲ್ಲಾ ಗವರ್ನರ್ ವಿಕ್ರಂದತ್ತ, ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೀಶ್ ಬಾಳಿಗ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ, ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ, ಉಪಾಧ್ಯಕ್ಷ ಅನಿಲ್ ಹೆಚ್.ಟಿ.ಕಾರ್ಯದರ್ಶಿ ಮುರಳಿ, ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಚಾಲಕ ಡಾ. ಚೆರಿಯಮನೆ ಪ್ರಶಾಂತ್, ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಕರುಂಬಯ್ಯ, ಡಾ. ನೀತಾ, ಹಾಜರಿದ್ದರು. 26 ಮಂದಿ ರಕ್ತದಾನ ಮಾಡಿದರು.