ಕನ್ನಡ ನುಡಿ, ಸಂಸ್ಕೃತಿ, ಸಾಹಿತ್ಯ ಎಲ್ಲೆಡೆ ಪಸರಿಸಲಿ: ಅನಿತಾ ಪೂವಯ್ಯ

KannadaprabhaNewsNetwork |  
Published : Nov 17, 2023, 06:45 PM IST
ಚಿತ್ರ : 16ಎಂಡಿಕೆ1 : ಭಾರತ ಸ್ವಾತಂತ್ರ್ಯೋತ್ಸವ ಅಮೃತೋತ್ಸವದ ಸವಿನೆನಪು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ.  | Kannada Prabha

ಸಾರಾಂಶ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೊಡಗು ಗೌಡ ಮಹಿಳಾ ಒಕ್ಕೂಟ ಆಶ್ರಯದಲ್ಲಿ ಇತ್ತೀಚೆಗೆ ಇಲ್ಲಿನ ಕೊಡಗು ಗೌಡ ಸಮಾಜದಲ್ಲಿ ನಡೆದ ಭಾರತ ಸ್ವಾತಂತ್ರ್ಯೋತ್ಸವ ಅಮೃತೋತ್ಸವದ ಸವಿನೆನಪು ಸಾಂಸ್ಕೃತಿಕ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಮಡಿಕೇರಿ ಕರ್ನಾಟಕ ಸಂಭ್ರಮ 50ರ ಸಂಭ್ರಮದಲ್ಲಿ ಕನ್ನಡ ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಎಲ್ಲೆಡೆ ಪಸರಿಸಬೇಕಿದೆ ಎಂದು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಹೇಳಿದ್ದಾರೆ.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೊಡಗು ಗೌಡ ಮಹಿಳಾ ಒಕ್ಕೂಟ ಆಶ್ರಯದಲ್ಲಿ ಇತ್ತೀಚೆಗೆ ಇಲ್ಲಿನ ಕೊಡಗು ಗೌಡ ಸಮಾಜದಲ್ಲಿ ನಡೆದ ಭಾರತ ಸ್ವಾತಂತ್ರ್ಯೋತ್ಸವ ಅಮೃತೋತ್ಸವದ ಸವಿನೆನಪು ಸಾಂಸ್ಕೃತಿಕ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಡಿಯಲ್ಲಿ ಕನ್ನಡ ನುಡಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು ಎಂದರು.

ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ಮಾತನಾಡಿ, ಭಾರತ ಅಮೃತೋತ್ಸವದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ಇಂತಹ ಸಂದರ್ಭಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕಾರ್ಯವಾಗುತ್ತಿದೆ. ಕನ್ನಡಿಗರು ಸೂಕ್ಷ್ಮ ಮನಸ್ಸಿನವರಾಗಿದ್ದು, ಶಾಂತಿಯೊಂದಿಗೆ ಎಲ್ಲರಲ್ಲೂ ಸಮಾನತೆ ಕಾಣುವವರು. ಸಾಮಾನ್ಯವಾಗಿ ಗಡಿಪ್ರದೇಶವನ್ನು ನಾವುಗಳು ಶ್ರೀಮಂತ ಪ್ರದೇಶವೆಂದು ತಿಳಿದಿದ್ದೇವೆ ಎಂದರು.

ನಿವೃತ್ತ ಪ್ರಾಂಶುಪಾಲ ಕೊಂಬಾರನ ಕುಂತಿ ಬೋಪಯ್ಯ ಮಾತನಾಡಿ, ಕರ್ನಾಟಕ ರಾಜ್ಯ ಆರು ಗಡಿ ಪ್ರದೇಶಗಳನ್ನು ಹೊಂದಿದ್ದು, ಅಲ್ಲಿನ ಗ್ರಾಮಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಕನ್ನಡಿಗರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ಪೂರೈಸುವ ಕೆಲಸ ಆಗಬೇಕಾಗಿದೆ ಎಂದರು.

ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿವರ್ಷ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗಡಿನಾಡ ಕನ್ನಡಿಗರು ಬಹು ಸಂಸ್ಕೃತಿಯವರಾಗಿದ್ದು, ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲರಲ್ಲೂ ಕನ್ನಡದ ಪ್ರಜ್ಞೆ ಮೊಳಗಲಿ ಎಂದು ಹೇಳಿದರು.

ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ಗಡಿ ಪ್ರದೇಶಗಳಲ್ಲಿ ಕನ್ನಡದ ಪ್ರೇಮಿಗಳಿದ್ದಾರೆ. ಕನ್ನಡ ಕಾರ್ಯಕ್ರಮಗಳಲ್ಲಿ ನಾವುಗಳು ಭಾಗವಹಿಸಬೇಕು ಎಂದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಯಾವುದೇ ಜಾತಿ, ಭಾಷೆ, ಧರ್ಮದ ಪರಿಮಿತಿಯಿಲ್ಲ. ಎಲ್ಲವನ್ನೂ ಮೀರಿದ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಅವುಗಳಿಗೆ ಇದೆ. ನಮ್ಮೊಳಗಡಗಿರುವ ಪ್ರತಿಭೆಗಳನ್ನು ಹೊರಹಾಕುವ ಒಂದು ಕಾಯಕವಷ್ಟೇ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿ ಅಭಿವೃದ್ಧಿ ಪ್ರಾಧಿಕಾರ ಈ ಜವಾಬ್ದಾರಿಯನ್ನು ಒಕ್ಕೂಟಕ್ಕೆ ನೀಡಿದ್ದು, ಕಳೆದ ಸಾಲಿನಲ್ಲಿಯೇ ನಡೆಸಬೇಕಾಗಿತ್ತು. ಕೋವಿಡ್, ಇನ್ನಿತರ ಕಾರಣಗಳಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ನವೆಂಬರ್ ತಿಂಗಳಲ್ಲಿ ಆಚರಿಸಲಾಗಿದೆ. ಒಕ್ಕೂಟದಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದು, ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಒಕ್ಕೂಟದ ನಿರ್ದೇಶಕಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ವಿಜೇತರಾದ ಸಾಹಿತಿ ಕಟ್ರತನ ಲಲಿತ ಅಯ್ಯಣ್ಣ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ. ಒಕ್ಕೂಟದ ನಿರ್ದೇಶಕರಾದ ಪೇರಿಯನ ಮುತ್ತಮ್ಮ, ಕಡ್ಲೇರ ಆಶಾಪ್ರಭು, ಬೈತಡ್ಕ ಜಾನಕಿ ಬೆಳ್ಯಪ್ಪ ಮತ್ತಿತರರಿದ್ದರು.

ಮಹಿಳಾ ಒಕ್ಕೂಟದ ಸದಸ್ಯರು ನಾಡಗೀತೆ ಹಾಡಿದರು. ಬಾರನ ಶೋಭಾ ಹಾಗೂ ಕಟ್ರತನ ಲಲಿತ ಅಯ್ಯಣ್ಣ ನಿರೂಪಿಸಿದರು. ದೇಲಂಪಾಡಿ ರಮ್ಯ ಸನ್ಮಾನಿತರ ಪರಿಚಯ ಮಾಡಿದರು. ಒಕ್ಕೂಟದ ಸ್ಥಾಪಕ ಕಾರ್ಯದರ್ಶಿ ಕೂಡಕಂಡಿ ಕಾವೇರಮ್ಮ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಟಿಪ್ಪರಲ್ಲಿ ಕರೆದೊಯ್ದ ಹೆಡ್‌ಮಾಸ್ಟರ್‌!
ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಶಿಫ್ಟ್‌ : ಸಂಪುಟ