ಮಾಗಡಿ: ನವಂಬರ್ ತಿಂಗಳಿಗೆ ಮಾತ್ರ ರಾಜ್ಯೋತ್ಸವ ಆಚರಣೆ ಮಾಡುವ ಬದಲು 365 ದಿನವೂ ಕನ್ನಡಾಂಬೆಯ ಆರಾಧನೆ ಮಾಡಬೇಕು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಕನ್ನಡಿಗರಾದವರು ನಾವು ವ್ಯವಹಾರಕ್ಕೆ ಬೇರೆ ಭಾಷೆಯನ್ನು ಕಲಿತು ನಮ್ಮ ಕನ್ನಡ ಭಾಷೆಯನ್ನು ಗೌರವಿಸುವ ಕೆಲಸವನ್ನು ಮಾಡಿದಾಗ ಮಾತ್ರ ಕನ್ನಡ ಭಾಷೆ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಮಾಗಡಿ ಪಟ್ಟಣದಲ್ಲಿ ಕನ್ನಡ ಭವನ ಮತ್ತು ಪತ್ರಿಕಾ ಭವನ ನಿರ್ಮಾಣಕ್ಕೆ ಈಗಾಗಲೇ ಜಾಗ ನಿಗದಿ ಮಾಡಿದ್ದು, ಕಟ್ಟಡ ನಿರ್ಮಾಣಕ್ಕೂ ಸಹಾಯ ಮಾಡುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶ್ರೀಪತಿಹಳ್ಳಿ ರಾಜಣ್ಣ ಮಾತನಾಡಿ, ನಮ್ಮ ಸಂಘಟನೆ ಕನ್ನಡ ಭಾಷೆ, ನೆಲ, ಜಲ ವಿರುದ್ಧ ಅನ್ಯಾಯವಾದರೆ ಹೋರಾಟಕ್ಕೆ ಸಿದ್ಧರಾಗಿದ್ದು, ಹಲವು ಹೋರಾಟಗಳಲ್ಲಿ ನಮ್ಮ ವೇದಿಕೆಯ ಸದಸ್ಯರು ಭಾಗವಹಿಸಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಾಗಿದೆ. ಎಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಿ ನಮ್ಮ ಸಂಘಟನೆ ಬಡವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. 9 ವರ್ಷಗಳಿಂದಲೂ ಸತತವಾಗಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು ರಾಜ್ಯೋತ್ಸವಕ್ಕೆ ಗಣ್ಯರ ಸಹಕಾರದಿಂದ ನಡೆಸಲಾಗುತ್ತಿದೆ ಇದೇ ರೀತಿ ಕನ್ನಡ ಸೇವೆಯನ್ನು ಮುಂದುವರಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.ಪಟ್ಟಣದ ಕಲ್ಯಾಗೇಟ್ ವಿನಾಯಕ ಸ್ವಾಮಿ ದೇವಸ್ಥಾನದಿಂದ ಡಾ. ರಾಜಕುಮಾರ್ ರಸ್ತೆ ಮೂಲಕ ಡೂಮ್ ಲೈಟ್ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೂ ಬೆಳ್ಳಿ ರಥದಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರವನ್ನು ಮೆರವಣಿಗೆಗೆ ಗಾರಡಿ ಗೊಂಬೆ, ಪಟ್ಟದ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ತಮಟೆ ವಾದ್ಯದೊಂದಿಗೆ ಮೆರವಣಿಗೆ ನಡೆಯಿತು. ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಮೂಲಕ ರಂಜಿಸಲಾಯಿತು.