ನೆಲ, ಜಲ, ಭಾಷೆ ಮೇಲೆ ಕನ್ನಡಿಗರಿಗೆ ಅಭಿಮಾನ ಇರಲಿ

KannadaprabhaNewsNetwork |  
Published : Mar 18, 2026, 01:15 AM IST
17ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಕುರಿತ ಶಿಬಿರವನ್ನು ರೈತ ಹೋರಾಟಗಾರ್ತಿ ಅನುಸೂಯಮ್ಮ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಸ್ವತಃ ಕನ್ನಡಿಗರೇ ಅಭಿಮಾನ ಶೂನ್ಯರಾಗಿದ್ದಾರೆ. ನಮ್ಮ ನಾಡಿನ ಹಿರಿಮೆ ಬಗ್ಗೆ ನಮಗೆ ಮೊದಲು ಅಭಿಮಾನ ಇರಬೇಕೇ ಹೊರತು ಬೇರೆಯವರಿಗಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು ಹೇಳಿದರು

ರಾಮನಗರ: ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಸ್ವತಃ ಕನ್ನಡಿಗರೇ ಅಭಿಮಾನ ಶೂನ್ಯರಾಗಿದ್ದಾರೆ. ನಮ್ಮ ನಾಡಿನ ಹಿರಿಮೆ ಬಗ್ಗೆ ನಮಗೆ ಮೊದಲು ಅಭಿಮಾನ ಇರಬೇಕೇ ಹೊರತು ಬೇರೆಯವರಿಗಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು ಹೇಳಿದರು.

ತಾಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಕುರಿತ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಹಾಗೂ ಬೂಕರ್ ಪ್ರಶಸ್ತಿ ಬಂದಿರುವುದು ಈ ನಾಡಿನ ಸಾಹಿತ್ಯದ ಹಿರಿಮೆಗೆ ಸಾಕ್ಷಿ. ಅದರ ಬಗ್ಗೆ ಎಲ್ಲರೂ ಅಭಿಮಾನಪಟ್ಟುಕೊಂಡು ನಮ್ಮ ಸಾಹಿತ್ಯದ ಕಂಪನ್ನು ಪಸರಿಸಬೇಕು. ಸಾಹಿತ್ಯವು ನಮ್ಮನ್ನು ಜಾತಿ, ಧರ್ಮ ಸೇರಿದಂತೆ ಮನುಷ್ಯ ವಿರೋಧಿ ಸಂಕೋಲೆಗಳಿಂದ ಬಿಡುಗಡೆಗೊಳಿಸುತ್ತದೆ. ಮೊದಲು ಅಕಾಡೆಮಿಗೆ ಒಂದೂವರೆ ಕೋಟಿ ಅನುದಾನ ಕೊಡುತ್ತಿದ್ದರು. ಅದಕ್ಕೆ ಕೆಲವರು, ಈ ಸಾಹಿತಿಗಳು ನಮ್ಮಿಂದ ಅನುದಾನ ಪಡೆದು ನಮಗೇ ಬೈದುಕೊಂಡು ತಿರುಗುತ್ತಾರೆ ಎಂದು ಅನುದಾನವನ್ನು 80 ಲಕ್ಷಕ್ಕೆ ಇಳಿಸಿದರು. ಸಾಹಿತ್ಯದಲ್ಲಿ ಆಸಕ್ತಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲದಲ್ಲೂ ಅದು ಬದಲಾಗಿಲ್ಲ ಎಂದು ಮುಕುಂದರಾಜ್ ಬೇಸರ ವ್ಯಕ್ತಪಡಿಸಿದರು.

ರೈತ ಹೋರಾಟಗಾರ್ತಿ ಅನುಸೂಯಮ್ಮ ಮಾತನಾಡಿ, ರೈತರ ಬದುಕಿಗೆ ಸಾಹಿತ್ಯ ಆಹ್ಲಾದಕರವಾಗಿ ಬಂದಿರಬಹುದೇ ಹೊರತು ಅನುಕೂಲಕರವಾಗಿ ಅಲ್ಲ. ಕುವೆಂಪು ಅವರ ಕಾಲಘಟ್ಟದಲ್ಲಿ ಸಾಹಿತ್ಯದಲ್ಲಿ ಕೃಷಿ ಆದ್ಯತೆಯಾಗಿ ಕಂಡಿತು. ಮುಂದೆ ಅದರ ಜಾಡಿನಲ್ಲಿ ಮತ್ತಷ್ಟು ಕೃತಿಗಳು ಬಂದಿವೆ ಎಂದು ಹೇಳಿದರು.

ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣವು ದೇಶದ ಕೃಷಿ ಮತ್ತು ಕೃಷಿಕರ ಬದುಕಿನ ಚಿತ್ರಣವನ್ನೇ ಬದಲಿಸಿವೆ. ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಪ್ರಭುತ್ವವೇ ಕಸಿದುಕೊಂಡು ರೈತರನ್ನು ಬೀದಿಗೆ ತಳ್ಳುತ್ತಿದೆ. ಕುವೆಂಪು ಅವರು ರೈತನನ್ನು ನೇಗಿಲಯೋಗಿ ಎಂದು ಕರೆದು ರಚಿಸಿದ ಕವಿತೆ ರೈತಗೀತೆ ಎಂದೇ ಜನಪ್ರಿಯವಾಗಿದೆ. ರೈತ ಈ ದೇಶದ ಚೊಚ್ಚಿಲಮಗ ಎಂದು ದ.ರಾ.ಬೇಂದ್ರೆ ಕರೆದರು. ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು ಬೇಸಾಯದಲ್ಲೇ ಬದುಕು ಕಟ್ಟಿಕೊಂಡು ಸಾಹಿತ್ಯ ರಚಿಸಿದರು. ಇದೆಲ್ಲವೂ ಸಾಹಿತ್ಯ ಮತ್ತು ಕೃಷಿ ನಡುವೆ ಪರಸ್ಪರ ಸಂಬಂಧ ಬೆಸೆದಿವೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ.ಮಂಜುನಾಥಸ್ವಾಮಿ ಮಾತನಾಡಿ, ಅನಾಗರಿಕನಾಗಿದ್ದ ಮನುಷ್ಯ ಬೇಸಾಯ ಕಂಡುಕೊಂಡ ಬಳಿಕ ನಾಗರಿಕನಾದ. ಹಿಂದಿನ, ಇಂದಿನ ಹಾಗೂ ಭವಿಷ್ಯದ ಬೇಸಾಯದ ಬದುಕನ್ನು ಅರಿಯಲು ಈ ಕಾರ್ಯಾಗಾರ ಏಣಿಯಾಗಬೇಕು. ಶಿಬಿರಾರ್ಥಿಗಳಿಗೆ ಹೊಸ ಅನುಭವ ಸಿಗುವಂತಾಗಬೇಕು ಎಂದರು.

ಕನ್ನಡ ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಕೃಷಿಯ ಸ್ವರೂಪ ವಿಷಯ ಕುರಿತು ಡಾ.ಚಂದ್ರಶೇಖರ ನಂಗಲಿ, ಕನ್ನಡ ಜಾನಪದ ಸಾಹಿತ್ಯ ಮತ್ತು ಕೃಷಿ ಸಂಸ್ಕೃತಿ ಕುರಿತು ಡಾ. ಟಿ.ಗೋವಿಂದರಾಜು, ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಕೃಷಿ ಸಂಸ್ಕೃತಿ ಕುರಿತು ಚನ್ನಪ್ಪ ಅಂಗಡಿ ಉಪನ್ಯಾಸ ನೀಡಿದರು.

ಅಕಾಡೆಮಿಯ ರಿಜಿಸ್ಟ್ರಾರ್ ಎನ್.ಕರಿಯಪ್ಪ , ಸದಸ್ಯ ರವಿಕುಮಾರ್ ಬಾಗಿ , ಟ್ರಸ್ಟ್ ಅಧ್ಯಕ್ಷ ಡಾ. ಎಂ. ಬೈರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್, ಲೇಖಕ ಡಾ. ನೂರ್ ಸಮದ್ ಅಬ್ಬಲಗೆರೆ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ...............

ಕೃಷಿಯಲ್ಲಿ ಖುಷಿಪಡಬೇಕು. ದೇಶ ಕಟ್ಟುವ ಪ್ರಕ್ರಿಯೆಯ ಮುಖ್ಯ ಭಾಗವಾಗಿ ಕೃಷಿಯನ್ನು ನೋಡಬೇಕು. ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳನ್ನು ಸರ್ಕಾರಗಳು ಬಗೆಹರಿಸಿ, ರೈತರನ್ನು ಸ್ವಾಬಲಂಬಿಗಳನ್ನಾಗಿ ಮಾಡಬೇಕು.

- ಪ್ರೊ.ಶಿವರಾಮಯ್ಯ, ಸಾಹಿತಿ

17ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಕುರಿತ ಶಿಬಿರವನ್ನು ರೈತ ಹೋರಾಟಗಾರ್ತಿ ಅನುಸೂಯಮ್ಮ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1,000 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಬೀದರ್ ಟೂ ಬೆಂಗಳೂರುವರೆಗೆ ಪಾದಯಾತ್ರೆ: ಕೆ.ಪಿ.ನಂಜುಂಡಿ