ಕನ್ನಡಪ್ರಭ ವಾರ್ತೆ ವಿಜಯಪುರಶಿಕ್ಷಣ ಎಂಬುದು ಬಾಳಿನ ದಿವ್ಯ ಬೆಳಕು, ಈ ಬೆಳಕು ಪ್ರತಿಯೊಬ್ಬರ ಬದುಕನ್ನು ಬೆಳಗಿಸುತ್ತದೆ. ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಹೀಗಾಗಿ ಶಿಕ್ಷಣ ಪ್ರಸಾರ ಒಂದು ಪವಿತ್ರವಾದ ಕಾರ್ಯ ಎಂದು ಯರನಾಳ ವಿರಕ್ತಮಠದ ಶ್ರೀ ಗುರುಸಂಗನಬಸವ ಸ್ವಾಮೀಜಿ ಹೇಳಿದರು.
ಗಣೇಶ ನಗರದಲ್ಲಿ ಆರಂಭಗೊಂಡ ನವೋದಯ, ಕಿತ್ತೂರ ಮೊದಲಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ನೀಡುವ ಮೂಲಕ ಪ್ರಸಿದ್ಧಿ ಪಡೆದಿರುವ ವೇದ ಅಕಾಡೆಮಿ 2ನೇ ಶಾಖೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಅನೇಕ ವರ್ಷಗಳಿಂದ ನವೋದಯ ಮೊದಲಾದ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ನಡೆಯುವ ಪರೀಕ್ಷೆಗೆ ಮಾರ್ಗದರ್ಶಿ ತರಬೇತಿ ನೀಡುವ ವೇದ ಅಕಾಡೆಮಿ ಗಣೇಶ ನಗರ ಭಾಗದಲ್ಲಿ ನೂತನ ಶಾಖೆ ತಲೆ ಎತ್ತಿರುವುದು ಈ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಈ ರೀತಿಯ ಜ್ಞಾನ ಉಣಬಡಿಸುವ ಕಾರ್ಯವನ್ನು ಶಿವಾನಂದ ಕೆಲೂರ ಮುಂದುವರಿಸಲಿ ಎಂದು ಶುಭ ಹಾರೈಸಿದರು.
ಕೃಷ್ಣಾ ಕಾಡಾ ಮಾಜಿ ನಿರ್ದೇಶಕ ರವಿ ಖಾನಾಪೂರ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಪಾಲಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳಿಗಾಗಿ ಅಮೂಲ್ಯ ಶಿಕ್ಷಣ ನೀಡಬೇಕು. ಜ್ಞಾನ ಎಂಬುದು ಯಾರೂ ಕಸಿದುಕೊಳ್ಳಲಾಗದ ಆಸ್ತಿ ಎಂದು ಹೇಳಿದರು.ವೇದ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ ಮಾತನಾಡಿ, ಪ್ರತಿ ಮಗುವಿನಲ್ಲಿಯೂ ಪ್ರತಿಭೆ ಇದೆ. ಪ್ರತಿಭೆ ಗುರುತಿಸಿ ಪ್ರಕಾಶಿಸುವಂತೆ ಮಾಡುವುದು ಶಿಕ್ಷಣ ಸಂಸ್ಥೆಯ ಹಾಗೂ ಶಿಕ್ಷಕರ ಕರ್ತವ್ಯ. ಈ ಕರ್ತವ್ಯವನ್ನು ನಿಭಾಯಿಸಿ ಜ್ಞಾನ ಪಸರಿಸುವ ಸಂಕಲ್ಪದೊಂದಿಗೆ ನೂತನ ಶಾಖೆ ಆರಂಭಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆ ಉಪಾಧ್ಯಕ್ಷ ದಯಾನಂದ ಕೆಲೂರ, ವಿಶ್ರಾಂತ ಡಿವೈಎಸ್‌ಪಿ ಬಸವರಾಜ ಚೌಕಿಮಠ ಮಾತನಾಡಿದರು. ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಕುಮಾರ ಗಡಗಿ, ಶಿವರುದ್ರ ಬಾಗಲಕೋಟ, ಡಾ.ಬಾಬು ರಾಜೇಂದ್ರ ನಾಯಕ, ಡಾ.ಬಾಬು ಸಜ್ಜನ, ಸುಧೀರ ಚಿಂಚಲಿ ಪಾಲ್ಗೊಂಡಿದ್ದರು.