ಆಧುನಿಕ ವೈದ್ಯ ವಿಜ್ಞಾನದ ಪ್ರಯೋಜನ ಜನರಿಗೆ ತಲುಪಲಿ

KannadaprabhaNewsNetwork | Updated : Jun 09 2024, 01:34 AM IST

ಸಾರಾಂಶ

ವೈದ್ಯರು ಅಧ್ಯಯನ ಶೀಲರಾಗಿ ಅನುಭವ, ಜ್ಞಾನದ ಸಾರವನ್ನು ಇತರೆ ವೈದ್ಯರಿಗೆ ದಾರೆ ಎರೆದಾಗ ರೋಗಿಗಳ ಚಿಕಿತ್ಸೆಯಲ್ಲಿ ಅತ್ಯಂತ ಕ್ರಿಯಾತ್ಮಕ ಬೆಳವಣಿಗೆಗಳು ಕಾಣಿಸುತ್ತವೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುವೈದ್ಯರು ಅಧ್ಯಯನ ಶೀಲರಾಗಿ ಅನುಭವ, ಜ್ಞಾನದ ಸಾರವನ್ನು ಇತರೆ ವೈದ್ಯರಿಗೆ ದಾರೆ ಎರೆದಾಗ ರೋಗಿಗಳ ಚಿಕಿತ್ಸೆಯಲ್ಲಿ ಅತ್ಯಂತ ಕ್ರಿಯಾತ್ಮಕ ಬೆಳವಣಿಗೆಗಳು ಕಾಣಿಸುತ್ತವೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು.ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬೆಂಗಳೂರು ನ್ಯೂರೋ ಎಜುಕೇಶನ್‌ ಟ್ರಸ್ಟ್‌, ಕರ್ನಾಟಕ ನರವಿಜ್ಞಾನ ಅಕಾಡೆಮಿ ಸಹಯೋಗದಲ್ಲಿ ನಡೆದ 13ನೇ ವಾರ್ಷಿಕ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ನರರೋಗ ವಿಜ್ಞಾನದಲ್ಲಿ ಸಾಕಷ್ಟು ಬೆಳವಣಿಗೆ ನಡೆಯುತ್ತಿವೆ. ಆಧುನಿಕ ವೈದ್ಯ ವಿಜ್ಞಾನದ ಸಂಪೂರ್ಣ ಪ್ರಯೋಜನ ಜನರಿಗೆ ತಲುಪಬೇಕು. ಇಂತಹ ವಾರ್ಷಿಕ ಸಮ್ಮೇಳನಗಳು ಗ್ರಾಮೀಣ ಭಾಗದ ಆರೋಗ್ಯ ಸೇವೆಗಳನ್ನು ಗುಣಾತ್ಮಕವಾಗಿ ಬದಲಿಸಬಲ್ಲವು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್‌ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಸಹಯೋಗದಲ್ಲಿ ಸಮ್ಮೇಳನ ನಡೆಯುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಒಂದೇ ಸೂರಿನಡಿ ನುರಿತ ನರರೋಗ ತಜ್ಞರು ತಮ್ಮ ಅಧ್ಯಯನಗಳನ್ನು ಮಂಡಿಸಿ ಅವುಗಳ ಕುರಿತು ಚರ್ಚೆ ನಡೆಸುತ್ತಿರುವುದು. ವೈದ್ಯಕೀಯ ಕಾಲೇಜು ವಿದ್ಯಾರ್ಥೀಗಳಿಗೆ ಅಧ್ಯಯನ ಹಾಗೂ ಕಲಿಕೆ ಪರಿಣಾಮಕಾರಿ ಆಯ್ಕೆಗಳನ್ನು ಒದಗಿಸುತ್ತದೆ ಎಂದರು.

ಸಮ್ಮೇಳನದ ಸಂಘಟನಾ ಅಧ್ಯಕ್ಷ ನರರೋಗ ತಜ್ಞ ಡಾ.ಉಮಾಶಂಕರ್‌ ಮಾತನಾಡಿ, ಸಿದ್ಧಗಂಗಾ ಮಠಾಧ್ಯಕ್ಷ ಪರಮಪೂಜ್ಯ ಸಿದ್ಧಲಿಂಗ ಶ್ರೀಗಳು ಕ್ರಿಯಾಶೀಲರು, ಚಿಂತನಶೀಲರು ರೋಗಿಗಳಿಗೆ ಕಡಿಮೆದರದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವ ಬಗ್ಗೆ ಸ್ವತಃ ಅಧ್ಯಯನ ನಡೆಸಿ ಮಾರ್ಗದರ್ಶನ ನೀಡುತ್ತಿರುತ್ತಾರೆ. ಅವರ ಆರ್ಶೀವಾದದ ಫಲದಿಂದ ಸಮ್ಮೇಳನ ಆಯೋಜನೆಯಾಗಿದೆ. ನರರೋಗಕ್ಕೆ ಸಂಬಂಧಿಸಿದ ಇತ್ತೀಚಿನ ಅಧ್ಯಯನಗಳು, ಹೊಸ ಸವಾಲುಗಳ ಕುರಿತು ಎರಡು ದಿನಗಳ ಕಾಲ ವಿಶೇಷ ಉಪನ್ಯಾಸಗಳು ನಡೆಯುತ್ತಿದ್ದು ರಾಜ್ಯ ಮಟ್ಟದ ಹೆಸರಾಂತರ ನರರೋಗ ತಜ್ಞರು ಭಾಗವಹಿಸಿರುವುದು ನರರೋಗ ವಿಭಾಗದಲ್ಲಿ ಹೊಸ ಆಶಾಭಾವನೆ ಮೂಡುವುದಕ್ಕೆ ಕಾರಣವಾಗಲಿದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಾಲಿನಿ, ಸಂಘಟನಾ ಕಾರ್ಯದರ್ಶಿ ಡಾ.ಕಿರಣ್‌ ಖ್ಹಾನಾಪುರೆ, ಡಾ.ಮೂರ್ತಿ, ನರವಿಜ್ಞಾನ ಸಮಿತಿ ಅಧ್ಯಕ್ಷ ಡಾ.ಗುರುಪ್ರಸಾದ್‌, ಕೆಎನ್‌ಎ ಅಧ್ಯಕ್ಷ ಡಾ.ಶಿವರಾಮಕೃಷ್ಣ , ಸೇರಿದಂತೆ ನರವಿಜ್ಞಾನ ವೈದ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article