ಸಿಬ್ಬಂದಿ ಸಹಕಾರದಿಂದ ಕಾರ್ಯ ನಿರ್ವಹಿಸಿ

KannadaprabhaNewsNetwork | Published : Jun 9, 2024 1:33 AM

ಸಾರಾಂಶ

ಕಷ್ಟಕರವಾದ ಹೆರಿಗೆ, ಹಾವು ಕಡಿತ ಇತ್ಯಾದಿ ಸಂದರ್ಭಗಳಲ್ಲಿ ಸೇವೆ ನೀಡುವುದು ಮತ್ತು ತಾಯಿ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು ಆರೋಗ್ಯ ಕವಚ ೧೦೮ನ ಮುಖ್ಯ ಗುರಿಯಾಗಿರುತ್ತದೆ.

ಶಿರಹಟ್ಟಿ: ಶಿರಹಟ್ಟಿ ತಾಲೂಕಾಸ್ಪತ್ರೆಗೆ ನಿತ್ಯ ೩೦೦ ರಿಂದ ೪೦೦ ಜನ ಗ್ರಾಮೀಣ ಪ್ರದೇಶದಿಂದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಕೆಲವರು ತುರ್ತು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಸಂಭವವೂ ಇರುತ್ತದೆ. ಅಂತಹ ಸಮಯದಲ್ಲಿ ತುರ್ತು ಚಿಕಿತ್ಸೆಗೆ ನೆರವಾಗುವ ೧೦೮ ಆ್ಯಂಬುಲೆನ್ಸ್‌ ಸಿಬ್ಬಂದಿ ರೋಗಿಗಳೊಂದಿಗೆ ಸಹಕಾರದಿಂದ ಕೆಲಸ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚನೆ ನೀಡಿದರು.ಶನಿವಾರ ಶಿರಹಟ್ಟಿ ತಾಲೂಕಾಸ್ಪತ್ರೆಗೆ ಸರ್ಕಾರ ನೀಡಿದ ಹೊಸ ೧೦೮ ಆ್ಯಂಬುಲೆನ್ಸ್‌ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ೧೦೮ ಸಿಬ್ಬಂದಿ ಆಸ್ಪತ್ರೆಯಲ್ಲಿಯೇ ವಾಸವಾಗಿದ್ದು, ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸಬೇಕು. ಯಾವುದೇ ಸಂದರ್ಭದಲ್ಲೂ ತುರ್ತು ಚಿಕಿತ್ಸೆ ಪಡೆಯಬೇಕಾದ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಅಪಘಾತ, ಅಗ್ನಿ ದುರಂತ, ಕಟ್ಟಡಗಳ ಕುಸಿತ, ನೈಸರ್ಗಿಕ ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ, ಕಷ್ಟಕರವಾದ ಹೆರಿಗೆ, ಹಾವು ಕಡಿತ ಇತ್ಯಾದಿ ಸಂದರ್ಭಗಳಲ್ಲಿ ಸೇವೆ ನೀಡುವುದು ಮತ್ತು ತಾಯಿ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು ಆರೋಗ್ಯ ಕವಚ ೧೦೮ನ ಮುಖ್ಯ ಗುರಿಯಾಗಿರುತ್ತದೆ. ಈ ಸೇವೆಯು ದಿನದ ೨೪ ಗಂಟೆಗಳು, ವಾರದ ಏಳು ದಿನಗಳು ಹಾಗೂ ೩೬೫ ದಿನವೂ ದೊರೆಯುತ್ತದೆ ಎಂದು ಹೇಳಿದರು.

ಈ ಹಿಂದೆ ಆಸ್ಪತ್ರೆಗೆ ನೀಡಿದ ವಾಹನ ಸಂಪೂರ್ಣ ಸವೇದ ಗಾಲಿಗಳು, ನಿಯಂತ್ರಣಕ್ಕೆ ಸಿಗದ ಬ್ರೇಕ್, ಹಾಳಾದ ಸಸ್ಪೆನ್ಷನ್, ಕಾರ್ಯ ನಿರ್ವಹಿಸದ ವೈಫರ್ ಇದು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ೧೦೮ ಆ್ಯಂಬುಲೆನ್ಸ್‌ಗಳಲ್ಲಿಯ ದೋಷಗಳ ಸ್ಯಾಂಪಲ್ ಆಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೇವಾ ಎಂಜನಿಯರ್‌ಗಳು ಪರಿಶೀಲನೆ ನಡೆಸಿ ಸಲ್ಲಿಸಿರುವ ವರದಿಯಲ್ಲಿ ಈ ದೋಷಗಳು ಪತ್ತೆಯಾಗಿದ್ದು, ರೋಗಿಗಳನ್ನು ಕರೆದೊಯ್ಯುವ ಆ್ಯಂಬುಲೆನ್ಸ್‌ಗಳೇ ಅಪಾಯಕಾರಿ ಸ್ಥಿರಿಯಲ್ಲಿವೆ. ಜನರು ಕೂಡ ಸಿಬ್ಬಂದಿಯೊಂದಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಚಿಕಿತ್ಸಾ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ೨೦೦೮ರ ನ. ೧ರಂದು ಆರೋಗ್ಯ ಕವಚ ೧೦೮ ಯೋಜನೆ ಆರಂಭಿಸಿತು. ಶರವೇಗದಲ್ಲಿ ಚಲಿಸುವ ಈ ವಾಹನದ ಚಕ್ರಗಳು ಬೇಗ ಸವೆಯುತ್ತವೆ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ೨.೫೦ ಲಕ್ಷ ಕಿಮೀ ಇಲ್ಲವೆ ನಾಲ್ಕು ವರ್ಷ ಪೂರ್ಣಗೊಂಡ ಆ್ಯಂಬುಲೆನ್ಸ್‌ಗಳನ್ನು ಬದಲಾಯಿಸಬೇಕು. ಆದರೆ ಇವೆಲ್ಲವನ್ನು ಮೀರಿರುವ ವಾಹನಗಳು ಇಂದಿಗೂ ಬಳಕೆಯಾಗುತ್ತಿರುವುದು ಆತಂಕ ಮೂಡಿಸಿದೆ ಎಂದರು.

ಒಟ್ಟಾರೆಯಾಗಿ ಶಿರಹಟ್ಟಿ ತಾಲೂಕಾಸ್ಪತ್ರೆಗೆ ಬರುವ ಯಾವೊಬ್ಬ ರೋಗಿಗಳಿಗೂ ಅನಾನುಕೂಲವಾಗದಂತೆ ಆರೋಗ್ಯ ಸಿಬ್ಬಂದಿ ಜತೆಗೆ ೧೦೮ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಆಸ್ಪತ್ರೆಯಲ್ಲಿಯ ಸಮಸ್ಯೆಗಳ ಕುರಿತು ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ರಟ್ಟಿಹಳ್ಳಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ಬಿಜೆಪಿ ಮಂಡಳದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕಬರಸಾಬ ಯಾದಗಿರಿ, ಅಶೋಕ ವರವಿ, ಶಂಕರ ಮರಾಠೆ, ಚನ್ನವೀರಪ್ಪ ಕಲ್ಯಾಣಿ, ಬಸವಣ್ಣೆಪ್ಪ ತುಳಿ, ತಿಪ್ಪಣ್ಣ ಕೊಂಚಿಗೇರಿ, ಮಲಕಾಜಪ್ಪ ಅಂಗಡಿ ಹಾಗೂ ತಾಲೂಕಾಸ್ಪತ್ರೆ ಸಿಬ್ಬಂದಿ ಸೇರಿ ಅನೇಕರು ಇದ್ದರು.

Share this article