ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳ ಮೂಲಕ ಗ್ರಂಥಾಲಯವನ್ನು ವಿಶಿಷ್ಟವಾಗಿ ಜ್ಞಾನಾರ್ಜನೆಗೆ ಬಳಸಿಕೊಳ್ಳಿ ಎಂದು ಹಿರಿಯ ವಕೀಲ ಭೂಪಾಳಂ ಪ್ರಭಾಕರ್ ಅಭಿಪ್ರಾಯಪಟ್ಟರು.ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಸೋಮವಾರ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಂದಾದೇವಿ ಭೂಪಾಳಂ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಎಐ ತಂತ್ರಜ್ಞಾನದ ಪರಿಕಲ್ಪನೆಯೆ ಒಂದು ಅದ್ಭುತ. ಕ್ಲೌಡ್ ಕಂಪ್ಯೂಟಿಂಗ್ ಮೂಲಕ ತಕ್ಷಣವೇ ವಿಶಿಷ್ಟ ಮಾಹಿತಿಗಳನ್ನು ಪಡೆಯಬಹುದಾಗಿದೆ.
ವಕೀಲ ವೃತ್ತಿಯಲ್ಲಿ ಬೆಳಗ್ಗೆ ನಡೆದ ನ್ಯಾಯಾಲಯದ ತೀರ್ಪುಗಳನ್ನು ಸಂಜೆಯ ವೇಳೆಗೆ ಅಧ್ಯಯನ ಮಾಡುವ ಅವಕಾಶ ಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ಎಐ ಮತ್ತು ಕ್ಲೌಡ್ ಕಂಪ್ಯೂಟಿಂಗ್. ಅಂತಹ ಮಾಹಿತಿ ತಂತ್ರಜ್ಞಾನಗಳ ಬಗ್ಗೆ ನಿರಂತರವಾಗಿ ಸಂಪರ್ಕ ಅಗತ್ಯ ಎಂದು ಹೇಳಿದರು.ಅಮೆರಿಕಾದ ಚಿಕಾಗೊದಲ್ಲಿ ನೆಲೆಸಿರುವ ವೈದ್ಯೆ ನಿರ್ಮಲಾ ಭೂಪಾಳಂ ಅವರ ಕಾಳಜಿಯ ಫಲವಾಗಿ ತನ್ನ ಸಹೋದರಿ ನಂದಾದೇವಿ ಅವರ ಹೆಸರಿನಲ್ಲಿ ಈ ನೂತನ ಗ್ರಂಥಾಲಯ ನಿರ್ಮಾಣ ಸಾಧ್ಯವಾಯಿತು. ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ ಅತಿ ಮುಖ್ಯವಾಗಿದ್ದು, ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಎನ್ಇಎಸ್ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶ್ರೇಷ್ಟಿ ಮಾತನಾಡಿ, ಮಹಾರಾಜರ ಆಡಳಿತದಲ್ಲಿ ಪ್ರಜಾ ಪ್ರತಿನಿಧಿಯಾಗಿದ್ದ ಭೂಪಾಳಂ ಚಂದ್ರಶೇಖರಯ್ಯ ಅವರು ಶಿವಮೊಗ್ಗ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕುಟುಂಬದ ಬಹುತೇಕ ಸದಸ್ಯರು ಎನ್ಇಎಸ್ ವಿದ್ಯಾರ್ಥಿಗಳು.ಕುಟುಂಬ ನೀಡಿದ 5 ಲಕ್ಷ ರು. ಜೊತೆಗೆ ಎನ್‌ಇಎಸ್ ಸಂಸ್ಥೆಯು ಜೊತೆಗೂಡಿ ಕಸ್ತೂರಬಾ ಕಾಲೇಜಿನಲ್ಲಿ ಚಂದ್ರಶೇಖರಯ್ಯ ಅವರ 7ನೇ ಮಗಳು ನಂದಾದೇವಿ ಅವರ ಹೆಸರಿನಲ್ಲಿ ಈ ಸ್ಮಾರಕ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸ್ಥಾಪಕರ ಧ್ಯೇಯೊದ್ದೇಶಗಳನ್ನು ಇಂದಿಗೂ ಎನ್ಇಎಸ್ ಸಂಸ್ಥೆ ಉಳಿಸಿಕೊಂಡು ಬರುತ್ತಿದೆ. ಎಲ್ಲರೂ ಓದುತ್ತಾರೆ, ಬೆಳೆಯುತ್ತಾರೆ ನಿಜ, ಅದರೇ ನಾನು ಬೆಳೆದ ನೆಲಕ್ಕೆ, ಕಲಿತ ವಿದ್ಯಾಸಂಸ್ಥೆ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಕಾಳಜಿ ಅಪರೂಪ. ಆದರೆ ಭೂಪಾಳಂ ಚಂದ್ರಶೇಖರಯ್ಯ ಅವರು ತಮ್ಮ ಕುಟುಂಬಕ್ಕೆ ಶಾಶ್ವತವಾಗಿ ಸಮಾಜಮುಖಿ ಕಾಳಜಿಯ ಸೌಜನ್ಯತೆಯನ್ನು ಬೇರೂರಿದ್ದಾರೆ ಎಂದು ತಿಳಿಸಿದ್ದಾರೆ.ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ವಿದ್ಯಾಸಂಸ್ಥೆ ಎಂಬ ದೇವಾಲಯಕ್ಕೆ ಗ್ರಂಥಾಲಯ ಎಂಬುದು ಗರ್ಭಗುಡಿ. ಅಂತಹ ಗರ್ಭಗುಡಿಯಲ್ಲಿ ಕಲಿತು ಯಶಸ್ಸಿನ ಹಾದಿಯೆಡೆಗೆ ನಡೆಯಿರಿ. ಅಧ್ಯಯನ ನಮ್ಮಲ್ಲಿ ಸೌಜನ್ಯತೆ, ಸಂಸ್ಕಾರ, ಮಾನವೀಯ ಸಂಬಂಧಗಳ ವೃದ್ಧಿಗೆ ಕಾರಣವಾಗುತ್ತದೆ ಎಂದರು.ಎನ್ಇಎಸ್ ಖಜಾಂಚಿ ಡಿ.ಜಿ.ರಮೇಶ್, ಭೂಪಾಳಂ ಸತ್ಯನಾರಾಯಣ, ವಿಶ್ವೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಆರ್.ವೆಂಕಟೇಶ್ ಸ್ವಾಗತಿಸಿದರು. ಉಪನ್ಯಾಸಕ ಎಸ್‌ಎಚ್.ರವಿಕುಮಾರ್ ನಿರೂಪಿಸಿ, ಹೆಚ್.ವಿ.ಶುಭಕರ್ ವಂದಿಸಿ, ವಿದ್ಯಾರ್ಥಿನಿ ಹೇಮಾ ಪ್ರಾರ್ಥಿಸಿದರು.